ತಿರುವನಂತಪುರ : ವಾಹನ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಮಾಡಿದ ಮತ್ತ್ತೊಂದು ಪ್ರಕರಣ ಕೇರಳದಲ್ಲಿ ನಡೆದಿದೆ. ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ನಡೆದ ವಾಹನ ಅಪಘಾತದಲ್ಲಿ ಕಿಲಿಮಾನೂರಿನ ಜಿಜಿನ್ (37) ಗಂಭೀರವಾಗಿ ಗಾಯಗೊಂಡಿದ್ದರು. ಕಲ್ಲಂಬಲಂ ಬಳಿಯ ತೊಟ್ಟಕ್ಕಾಡ್‌ನಲ್ಲಿ ಜಿಜಿನ್ ಅವರ ಬೈಕ್ ಕಾರೊಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಜಿಜಿನ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಅಧಿಕೃತರು ಧೃಢಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಜಿನ್ ಅವರ ಕುಟುಂಬವು ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದೆ. ಯಕೃತ್ತು, ಮೂತ್ರಪಿಂಡ, ಹೃದಯ, ಮೇದೋಜ್ಜೀರಕ ಗ್ರಂಥಿ ಮತ್ತು ಕಾರ್ನಿಯಾ ಈ ಐದು ಅಂಗಗಳನ್ನು ದಾನ ಮಾಡಲು ಕುಟುಂಬದವರು ತೀರ್ಮಾನಿಸಿದ್ದಾರೆ. ಒಂದು ಮೂತ್ರಪಿಂಡ ಮತ್ತು ಕಾರ್ನಿಯಾಗಳಿಗೆ ಈಗಾಗಲೇ ಫಲಾನುಭವಿಗಳು ದೊರಕಿದ್ದು ಇತರ ಅಂಗಗಳನ್ನು ದಾನ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಮೃತ ಜಿಜಿನ್ ಚಡಯಮಂಗಲಂ ಬ್ಲಾಕ್ ಪಂಚಾಯತ್‌ನಲ್ಲಿ ಗುಮಾಸ್ತರಾಗಿದ್ದರು.
ಇತ್ತೀಚೆಗಷ್ಟೇ ಪತ್ತನಂತಿಟ್ಟ ಜಿಲ್ಲೆಯ ಮಲ್ಲಪ್ಪಳ್ಳಿಯ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್ ಜಾನ್ ಅವರ 10 ತಿಂಗಳ ಪುತ್ರಿ ಅಲಿನ್ ಶೆರಿನ್ ಅವರ ಅಂಗಾಂಗಗಳನ್ನು ದಾನ ಮಾಡಿದ ಘಟನೆ ನಡೆದಿದ್ದು ಪ್ರಧಾನಿಯವರು ತಮ್ಮ ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ್ದರು.

0 Comments