ಕಣ್ಣೂರು: ಮಗನ ಮದುವೆಗೆ ಆಹ್ವಾನ ನೀಡಲು ಪತಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿಯೊಬ್ಬರು ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಕೂತುಪರಂಬದ ಮೇರುವಾಂಬೆಯ ಪಳ್ಳಿಕುನ್ನುವಿನ ಬಳಿ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಳ್ಳಿಕುನ್ನು ವಲ್ಲಿ ಹೌಸ್‌ನ ಪ್ರೇಮಿ (60) ಮೃತಪಟ್ಟಿದ್ದಾರೆ. ಮಗನ ಮದುವೆಗೆ ಆಹ್ವಾನ ನೀಡಲು ಅವರು ತಮ್ಮ ಪತಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೂತುಪರಂಬದಿಂದ ಮಟ್ಟನ್ನೂರಿಗೆ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಸ್ಥಳೀಯರು ತಕ್ಷಣ ಪ್ರೇಮಿಯನ್ನು ಕೂತುಪರಂಬ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರೂ, ಅವರ ಜೀವ ಉಳಿಸಲಾಗಲಿಲ್ಲ. ಅವರ ಪತಿ ಅಚ್ಯುತನ್ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೂ ಗಂಭೀರ ಗಾಯಗಳಾಗಿದೆ. ಇವರ ಮಗನ ಮದುವೆ ಮಾರ್ಚ್ 8 ರಂದು ನಿಗದಿಯಾಗಿತ್ತು. ಸ್ಥಳೀಯರನ್ನು ಮದುವೆಗೆ ಆಹ್ವಾನಿಸಲು ಇಬ್ಬರೂ ಮನೆಯಿಂದ ಹೊರಟಾಗ ಈ ಅಪಘಾತ ಸಂಭವಿಸಿದೆ. ಕೂತುಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಕ್ರಮ ಕೈಗೊಂಡರು.

0 Comments