ಕಾಸರಗೋಡು: ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರಲ್ಲಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮತದಾನ ನನ್ನ ಜವಾಬ್ದಾರಿ ಎಂಬ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮತದಾನದ ಹಕ್ಕನ್ನು ಚಲಾಯಿಸುವಂತೆ ಸಂದೇಶ ನೀಡಲು ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ವೀಪ್ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಕುಂಬಳೆ ಮಾವಿನಕಟ್ಟೆ ಕೊರಗ ಉನ್ನತಿಯಿಂದ ಚುನಾವಣಾ ಬಂಡಿ ಮತದಾನ ಅಭಿಯಾನ ಯಾತ್ರೆಗೆ ಚಾಲನೆ ನೀಡಲಾಯಿತು.ಚಲನಚಿತ್ರ ನಟ ಉಣ್ಣಿರಾಜ್ ಮುಖ್ಯ ಅತಿಥಿಯಾಗಿದ್ದರು, ಉಪ ಜಿಲ್ಲಾಧಿಕಾರಿ ವಿ.ಪಿ. ರಘುಮಣಿ, ಸ್ವೀಪ್ ನೋಡಲ್ ಅಧಿಕಾರಿ ರತೀಶ್ ಪಿಲಿಕೋಡ್, ಕೊರಗ ಸ್ಪೆಷಲ್ ಪ್ರಾಜೆಕ್ಟ್ ಸಹಾಯಕ ಸಂಯೋಜಕ ಯದುರಾಜ್, ಡಿಪಿಎಂ ಜಿತಿನ್, ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು. ಉನ್ನತಿಯ ಸುಮಾರು 100 ಮತದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಳಿಕ ಮಂಜೇಶ್ವರ, ವರ್ಕಾಡಿ, ಮೀಂಜ, ಪೈವಳಿಕೆ, ಎಣ್ಮಕಜೆ, ಬದಿಯಡ್ಕ, ಮಧೂರು ಮುಂತಾದ ಪಂಚಾಯತುಗಳ ಕೊರಗ ಉನ್ನತಿಗಳಿಗೆ ಯಾತ್ರೆ ಸಾಗಿತು.
ಜಿಲ್ಲೆಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಪ್ರಥಮ ಬಾರಿಗೆ ಮತದಾರರನ್ನು ಭೇಟಿ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಚುನಾವಣಾ ಸಂಬಂಧಿತ ವಿಷಯಗಳನ್ನು ವಿವರಿಸಲು ಮತದಾನದ ಗಾಡಿ ಯಾತ್ರೆ ಫೆಬ್ರವರಿ 20 ರಂದು ಪ್ರಾರಂಭವಾಗಲಿದೆ. ಜಿಲ್ಲಾಧಿಕಾರಿ ಕೆ.ಇಂಭಶೇಖರ್ ಐಎಎಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಿತ್ರನಟ ಉಣ್ಣಿರಾಜ್, ಜಾನಪದ ಗಾಯಕ ರಮ್ಶಿಪಟ್ಟುವಂ ಭಾಗವಹಿಸಲಿದ್ದಾರೆ. ಫೆಬ್ರವರಿ 26 ರವರೆಗೆ ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಚುನಾವಣಾ ಬಂಡಿ ಪ್ರಯಾಣಿಸಲಿದೆ.


0 Comments