Ticker

6/recent/ticker-posts

Ad Code

ಪೆರ್ಲದಲ್ಲಿ ಪಶುಸಂಗೋಪನಾ ಇಲಾಖೆಯ ಸ್ಯಾಟಲೈಟ್ ಕಂಟೇನರ್ ಚೆಕ್ ಪೋಸ್ಟ್ ಕಚೇರಿ ಉದ್ಘಾಟನೆ


 ಪೆರ್ಲ :ಜಾನುವಾರುಗಳ ಮೂಲಕ ಹರಡುವ ರೋಗಗಳನ್ನು ತಡೆಗಟ್ಟುವ ಭಾಗವಾಗಿ ರಾಜ್ಯದ ಗಡಿಗಳಲ್ಲಿ ಪಶುಸಂಗೋಪನಾ ಇಲಾಖೆಯ 19 ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದೆ. ಪೆರ್ಲ ಚೆಕ್ ಪೋಸ್ಟ್ ನಲ್ಲಿ ತಪಾಸಣಾ ಸೇವೆಯನ್ನು ಸುಧಾರಿಸುವ ಭಾಗವಾಗಿ ಹೊಸ ಸ್ಯಾಟಲೈಟ್ ಕಂಟೇನರ್ ಕಚೇರಿ ತೆರೆಯಲಾಗಿದೆ ಎಂದು ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಸಚಿವೆ ಜೆ.ಚಿಂಜುರಾಣಿ ಹೇಳಿದರು. ಎಣ್ಮಕಜೆ ಗ್ರಾಪಂ ಸಭಾಂಗಣದಲ್ಲಿ ನಡೆದ ಚೆಕ್ ಪೋಸ್ಟ್ ಲೋಕಾರ್ಪಣೆ ಸಮಾರಂಭವನ್ನು ಆನ್ ಲೈನ್ ನಲ್ಲಿ ಉದ್ಘಾಟಿಸಿ ಮಾತನಾಡಿದರು. ಚೆಕ್ ಪೋಸ್ಟ್ ಗಳಲ್ಲಿ ಹೊರ ರಾಜ್ಯಗಳಿಂದ ತರಲಾಗುವ ಜಾನುವಾರುಗಳ ಆರೋಗ್ಯ ತಪಾಸಣೆ, ಹಕ್ಕಿಜ್ವರ ಇತರ ಪ್ರಾಣಿಜನ್ಯ ರೋಗ ತಡೆಯಲು, ಮೊಟ್ಟೆಯ ಗುಣಮಟ್ಟ ತಪಾಸಣೆ ನಡೆಸಲಾಗುತ್ತಿದೆ. ಚೆಕ್ ಪೋಸ್ಟ್ ಮೂಲಕ ಹಾದುಹೋಗುವ ಎಲ್ಲಾ ಪ್ರಾಣಿಗಳ ನೋಂದಣಿ, ಲಸಿಕೆ ಮುಂತಾದ ಚಟುವಟಿಕೆಗಳಿಂದ ಜಾನುವಾರುಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು ಎಂದರು.

ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಚೆಕ್ ಪೋಸ್ಟ್ ನಲ್ಲಿ ಮೂಲ  ಸೌಕರ್ಯ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಿ.ಪಂ.ಸದಸ್ಯ ಸೋಮಶೇಖರ್ ಜೆ‌.ಎಸ್, ಗ್ರಾ ಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್, ಬ್ಲಾಕ್ ಪಂ.ಸದಸ್ಯೆ ನಫೀಸತ್ ಮಿಸ್ರಿಯ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಮ್ಲಾ ಇಬ್ರಾಹಿಂ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯಾ ಕೆ., ಸದಸ್ಯೆ ಅಯಿಷತ್ ರಾಬಿಯಾ, ಆಯಿಷಾ ಎ.ಎ., ರಾಮಚಂದ್ರ ಎಂ., ರಾಜಕೀಯ ಪಕ್ಷಗಳ ನಾಯಕರಾದ ರಾಮಕೃಷ್ಣ ರೈ, ಬಿ.ಎಸ್ ಗಾಂಭೀರ್ ಮಾತನಾಡಿದರು. ಪಾಲಕ್ಕಾಡ್ ಪ್ರಧಾನ ಕಚೇರಿಯ ಪಶುವೈದ್ಯ ಶಸ್ತ್ರಚಿಕಿತ್ಸಕಿ ಡಾ. ವಿನೀತಾ.ಸಿ.ಬಿ.ವರದಿ ಮಂಡಿಸಿದರು. ಪೆರ್ಲ ಪಶುವೈದ್ಯಕೀಯ ಔಷಧಾಲಯದ ಪಶುವೈದ್ಯ ಶಸ್ತ್ರಚಿಕಿತ್ಸಕ ಡಾ.ಘನಶ್ಯಾಮ್ ಜೋಶಿ, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಚೆಕ್ ಪೋಸ್ಟ್ ಉದ್ದೇಶ, ಚಟುವಟಿಕೆಗಳು ಮತ್ತು ಪ್ರಾಣಿಗಳಿಂದ ಹರಡುವ ರೋಗಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಯಿತು. ಕಾಸರಗೋಡು ಮೊಬೈಲ್ ಸರ್ಜರಿ ಘಟಕದ ಪಶುವೈದ್ಯ ಶಸ್ತ್ರಚಿಕಿತ್ಸಕ ಡಾ.ಸೂರ್ಯ ಮಾಹಿತಿ ನೀಡಿದರು. ಜಿಲ್ಲಾ ಪಶುಸಂಗೋಪನಾ ಅಧಿಕಾರಿ ಡಾ. ಬಿಂದು ಕೆ.ವಿ.ಸ್ವಾಗತಿಸಿದರು. ಕ್ಷೇತ್ರ ಅಧಿಕಾರಿ ಎಂ. ಸುನಿಲ್ ಕುಮಾರ್ ವಂದಿಸಿದರು.

Post a Comment

0 Comments