ಮುಳ್ಳೇರಿಯ : ಕೋಟೂರಿನ ತೆಂಗಿನ ನಾರು ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂಗಳ ನಾಶ ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ. ಕೋಟೂರಿನ ಹರಿಕೃಷ್ಣನ್ ಎಂಬವರ ಮಾಲಕತ್ವದಲ್ಲಿರುವ ತೆಂಗಿನ ನಾರಿನ ಕಾರ್ಖಾನೆ ಇದಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿಯನ್ನು ಗಮನಿಸಿದ ಸ್ಥಳೀಯರು ಮಾಲೀಕರಿಗೆ ಮಾಹಿತಿ ನೀಡಿದ್ದು, ಕುಟ್ಟಿಕೋಲ್ ಮತ್ತು ಕಾಸರಗೋಡಿನ ಮೂರು ಅಗ್ನಿಶಾಮಕ ದಳಗಳು ಮತ್ತು ಸ್ಥಳೀಯರ ಸಹಾಯದಿಂದ ಇಂದು ಬೆಳಗಿನ ಜಾವ 3 ಗಂಟೆಯ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.
ತೆಂಗಿನ ನಾರು ಸಂಗ್ರಹಿಸಿಟ್ಟಿದ್ದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಜಾದಿನವಾಗಿದ್ದರಿಂದ, ಕಾರ್ಖಾನೆಯಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು ಮತ್ತು ಕಾರ್ಖಾನೆಯೊಳಗೆ ಚೆಲ್ಲಿದ ಕಿಡಿಗಳಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ಮಾಲೀಕ ಹರಿಕೃಷ್ಣನ್ ಹೇಳಿದ್ದಾರೆ. ಕಾರ್ಖಾನೆಯೊಳಗಿನ ಉತ್ಪನ್ನಗಳು ಸಂಪೂರ್ಣವಾಗಿ ನಾಶವಾಗಿವೆ. ಯಂತ್ರದ ಭಾಗಗಳು ಭಾಗಶಃ ಸುಟ್ಟುಹೋಗಿವೆ. ಸುಮಾರು 10 ಲಕ್ಷ ರೂ.ಗಳ ನಾಶ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.


0 Comments