Ticker

6/recent/ticker-posts

Ad Code

ಹೋಂವರ್ಕ್ ಮಾಡದ ಮಗುವಿಗೆ ಅಮಾನುಷವಾಗಿ ಥಳಿಸಿದ ಶಿಕ್ಷಕ

 

ಲಕ್ನೋ: ಹೋಂವರ್ಕ್ ಪೂರ್ಣಗೊಳಿಸದ ಕಾರಣಕ್ಕೆ ಎರಡನೇ ತರಗತಿ ಮಗುವಿಗೆ ಬಾಸುಂಡೆ ಬರುವವರೆಗೂ ನೂರೈವತ್ತು ಬಾರಿ ಥಳಿಸಿದ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ  ಗೊಂಡಾ ಜಿಲ್ಲೆಯ ಕರ್ನೈಲಗಂಜ್ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ಇಲ್ಲಿನ ಎಂಆರ್‌ಜಿ ಶಾಲೆಯ ಇಂಗ್ಲಿಷ್ ಶಿಕ್ಷಕ ಪ್ರಖರ್ ಸಿಂಗ್ ಎಂಬಾತ ಮಗುವಿನ ಮೇಲೆ‌ ಹಲ್ಲೆ ನಡೆಸಿದ್ದಾನೆ ಆರೋಪಿಸಲಾಗಿದೆ. ಹೋಂವರ್ಕ್ ಪೂರ್ಣಗೊಳಿಸದ ಕಾರಣದಿಂದ ಶಿಕ್ಷಕ ಕೋಪಗೊಂಡು ಮಗುವಿನ ಕಾಲುಗಳ ಮೇಲೆ ಪದೇ ಪದೆ ಹೊಡೆದಿದ್ದಾರೆ. ಇದರಿಂದ ಮಗುವಿನ ಕಾಲುಗಳಲ್ಲಿ ಗಾಯದ ಗುರುತುಗಳು, ಊತ ಮತ್ತು ತೀವ್ರ ನೋವು ಉಂಟಾಗಿದೆ ಎಂದು ತಿಳಿದುಬಂದಿದೆ.

ಮಗು ಮನೆಗೆ ತಲುಪಿದಾಗ ಕುಂಟುತ್ತಾ ಬಂದಿದ್ದು, ದೇಹದ ಮೇಲಿನ ಗಾಯದ ಗುರುತುಗಳನ್ನು ನೋಡಿ ಕುಟುಂಬಸ್ಥರು ಆಘಾತಗೊಂಡಿದ್ದು, ಮಗುವಿನ ತಂದೆ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ನಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ   ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115 (2), 351 (3) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕರ್ನೈಲಗಂಜ್ ಸರ್ಕಲ್ ಆಫೀಸರ್ ಅಭಿಷೇಕ್ ದಬಾಚಾ ತಿಳಿಸಿದ್ದಾರೆ.

ಘಟನೆ ಬಳಿಕ ಶಾಲಾ ಪ್ರಾಂಶುಪಾಲರು ತಕ್ಷಣವೇ ಇಂಗ್ಲಿಷ್ ಶಿಕ್ಷಕನನ್ನು ಸೇವೆಯಿಂದ  ವಜಾಗೊಳಿಸಿದ್ದಾರೆ   ಎನ್ನಲಾಗಿದೆ.  ಪೊಲೀಸರು ಆರೋಪಿಯ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Post a Comment

0 Comments