ಕಾಲ ಬದಲಾದಂತೆ ಹಳೆಯ ವಸ್ತುಗಳು ಇತಿಹಾಸದ ಪುಟ ಸೇರುವುದು ಸಹಜ. ಆದರೆ, ಟೆಲಿವಿಷನ್ ಆರ್ಭಟ, ಸ್ಮಾರ್ಟ್‌ಫೋನ್ ಕ್ರಾಂತಿ ಮತ್ತು ಇಂಟರ್ನೆಟ್ ಸುನಾಮಿಯ ನಡುವೆಯೂ ಮಣಿಯದೆ ನಿಂತಿರುವ ಒಂದು ಮಾಧ್ಯಮವೆಂದರೆ ಅದು 'ರೇಡಿಯೋ'. ಇಂದು ವಿಶ್ವ ರೇಡಿಯೋ ದಿನ. ಈ ಸಂದರ್ಭದಲ್ಲಿ ರೇಡಿಯೋ ಎಂಬ ಮಾಂತ್ರಿಕ ಪೆಟ್ಟಿಗೆಯ ಪಯಣವನ್ನು ಒಮ್ಮೆ ತಿರುಗಿ ನೋಡಬೇಕಿದೆ.
ರೇಡಿಯೋ ಕೇವಲ ಧ್ವನಿ ಕೇಳಿಸುವ ಸಾಧನವಲ್ಲ; ಅದು ಕೋಟ್ಯಂತರ ಜನರ ಭಾವನೆ. 1920ರ ದಶಕದಲ್ಲಿ ವಾಣಿಜ್ಯ ಪ್ರಸಾರ ಆರಂಭಿಸಿದ ರೇಡಿಯೋಗೆ ಈಗ ನೂರರ ಸಂಭ್ರಮ. ಒಂದು ಕಾಲದಲ್ಲಿ ಮನೆಯ ಹಿರಿಯರು ರೇಡಿಯೋ ಸುತ್ತ ಕುಳಿತು ಸುದ್ದಿ ಕೇಳುತ್ತಿದ್ದ ದೃಶ್ಯವಿತ್ತು. ವಿಜ್ಞಾನದ ಅದ್ಭುತ ಆವಿಷ್ಕಾರಗಳಲ್ಲಿ ರೇಡಿಯೋ ಕೂಡ ಒಂದು. ತಂತ್ರಜ್ಞಾನದ ಓಟದಲ್ಲಿ ಪ್ರತಿರೋಧವಿಲ್ಲದೆ ಅಳಿದುಹೋದ ಸಾಧನಗಳು ಹಲವು. ಆದರೆ, ಟೆಲಿವಿಷನ್ ಬಂದಾಗ, ಇಂಟರ್ನೆಟ್ ಕ್ರಾಂತಿಯಾದಾಗ ಮತ್ತು ಸ್ಮಾರ್ಟ್‌ಫೋನ್‌ಗಳು ಅಂಗೈಗೆ ಬಂದಾಗಲೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಉಳಿಸಿಕೊಂಡ ಅಪರೂಪದ ಮಾಧ್ಯಮ 'ರೇಡಿಯೋ'. ಮೊಬೈಲ್ ಮತ್ತು ಇಂಟರ್ನೆಟ್ ಜಗತ್ತನ್ನು ಆಳುತ್ತಿರುವ ಇಂದಿನ ಕಾಲದಲ್ಲೂ ರೇಡಿಯೋ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ. ರೇಡಿಯೋ ಎಂಬುದು ಕೇವಲ ನೆನಪಲ್ಲ, ಅದು ನಿರಂತರವಾಗಿ ಹರಿಯುವ ಜ್ಞಾನದ ತೊರೆ. ಮಾಹಿತಿ ಹಂಚಲು ಮತ್ತು ಜನರನ್ನು ಒಗ್ಗೂಡಿಸಲು ರೇಡಿಯೋಗಿಂತ ಉತ್ತಮವಾದ ಮತ್ತೊಂದು ಸರಳ ಮಾಧ್ಯಮವಿಲ್ಲ.
ಇಂದಿನ ಡಿಜಿಟಲ್ ಯುಗದಲ್ಲೂ ರೇಡಿಯೋ ಅತಿ ಹೆಚ್ಚು ಜನರನ್ನು ತಲುಪುವ ಮತ್ತು ಅತ್ಯಂತ ಕಡಿಮೆ ವೆಚ್ಚದ ಸಮೂಹ ಮಾಧ್ಯಮವಾಗಿದೆ. ರೇಡಿಯೋ ಕೇಳಲು ಯಾವುದೇ ಹೆಚ್ಚಿನ ಶುಲ್ಕ ಬೇಕಿಲ್ಲ. ಬಡವರಿಗೂ ಸುಲಭವಾಗಿ ಸಿಗುವ ಏಕೈಕ ಮಾಧ್ಯಮವಿದು. ರೇಡಿಯೋ ಅತ್ಯಂತ ಪ್ರಜಾಪ್ರಭುತ್ವವಾದಿ ಮಾಧ್ಯಮ. ಓದು ಬರಹ ತಿಳಿಯದವರಿಗೂ, ದೂರದ ಬೆಟ್ಟದ ತಪ್ಪಲಿನಲ್ಲಿರುವವರಿಗೂ ಇದು ಮಾಹಿತಿಯನ್ನು ತಲುಪಿಸುತ್ತದೆ. ಇಂದಿಗೂ ಭಾರತದ ಹಳ್ಳಿಗಳಲ್ಲಿ 'ಆಕಾಶವಾಣಿ'ಯೇ ಅನೇಕರ ಬೆಳಗಿನ ಅಲಾರಂ ಮತ್ತು ಜ್ಞಾನದ ಮೂಲ. ನೈಸರ್ಗಿಕ ವಿಕೋಪಗಳು ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಇಂಟರ್ನೆಟ್ ಕೈಕೊಟ್ಟಾಗಲೂ ಬ್ಯಾಟರಿ ಚಾಲಿತ ರೇಡಿಯೋಗಳು ಮಾಹಿತಿಯನ್ನು ನೀಡುತ್ತವೆ. ಅಂತಹ ಸಂದರ್ಭಗಳಲ್ಲಿ ರೇಡಿಯೋ ತರಂಗಗಳು ಸಂಕಷ್ಟದಲ್ಲಿರುವವರಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತವೆ. ರಕ್ಷಣಾ ಕಾರ್ಯಾಚರಣೆಗಳಲ್ಲಿ ರೇಡಿಯೋ ಪಾತ್ರ ಅನನ್ಯ.
19ನೇ ಶತಮಾನದ ಅಂತ್ಯದಲ್ಲಿ ಗುಗ್ಲಿಮೋ ಮಾರ್ಕೋನಿ ಅವರು ರೇಡಿಯೋ ತಂತ್ರಜ್ಞಾನವನ್ನು ಲೋಕಕ್ಕೆ ಪರಿಚಯಿಸಿದರು. ಅಂದಿನಿಂದ ಇಂದಿನವರೆಗೆ ರೇಡಿಯೋ ಅನೇಕ ಮೈಲಿಗಲ್ಲುಗಳನ್ನು ದಾಟಿ ಬಂದಿದೆ. ಪ್ರತಿ ವರ್ಷ ಫೆಬ್ರವರಿ 13 ರಂದು ನಾವು 'ವಿಶ್ವ ರೇಡಿಯೋ ದಿನ'ವನ್ನು ಆಚರಿಸುತ್ತೇವೆ. ವಿಶ್ವಸಂಸ್ಥೆಯು 1946ರಲ್ಲಿ ತನ್ನದೇ ಆದ ರೇಡಿಯೋ ಕೇಂದ್ರವನ್ನು ಆರಂಭಿಸಿದ ದಿನದ ನೆನಪಿಗಾಗಿ ಯುನೆಸ್ಕೋ 2011 ರಲ್ಲಿ ಈ ದಿನವನ್ನು ಆಚರಣೆಗೆ ತಂದಿತು. ರೇಡಿಯೋದ ಮಹತ್ವವನ್ನು ಜನರಿಗೆ ತಿಳಿಸುವುದು ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಸ್ಥಳೀಯ ಭಾಷೆ, ಜಾನಪದ ಕಲೆ ಮತ್ತು ಶಾಸ್ತ್ರೀಯ ಸಂಗೀತವನ್ನು ಉಳಿಸುವಲ್ಲಿ ಆಕಾಶವಾಣಿಯಂತಹ ರೇಡಿಯೋ ಕೇಂದ್ರಗಳ ಕೊಡುಗೆ ಅಪಾರ. ಕೃಷಿ ರಂಗದ ಆಧುನಿಕ ಮಾಹಿತಿಯನ್ನು ರೈತರಿಗೆ ತಲುಪಿಸುವಲ್ಲಿ 'ಕೃಷಿರಂಗ'ದಂತಹ ಕಾರ್ಯಕ್ರಮಗಳು ಇಂದಿಗೂ ಮಾದರಿ. ರೈತರಿಗೆ ಹವಾಮಾನ ವರದಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಜನಸಾಮಾನ್ಯರಿಗೆ ದೇಶ-ವಿದೇಶಗಳ ಸುದ್ದಿಯನ್ನು ತಲುಪಿಸುವಲ್ಲಿ ರೇಡಿಯೋ ಮುಂಚೂಣಿಯಲ್ಲಿದೆ. ಹಾಗಾಗಿಯೇ ಇದೊಂದು ಮಾಹಿತಿಯ ಮೂಲ.
ಹಳೆಯ ಹಾಡುಗಳು, ನಾಟಕಗಳು ಮತ್ತು ಕ್ರೀಡಾ ವೀಕ್ಷಕ ವಿವರಣೆಯ ಮೂಲಕ ದಶಕಗಳಿಂದ ರೇಡಿಯೋ ಜನರನ್ನು ರಂಜಿಸುತ್ತಾ ಬಂದಿದೆ. ಪ್ರಧಾನ ಮಂತ್ರಿಗಳ 'ಮನ್ ಕಿ ಬಾತ್' ಕಾರ್ಯಕ್ರಮವು ರೇಡಿಯೋಗೆ ಹೊಸ ಚೈತನ್ಯ ನೀಡಿದ್ದನ್ನು ನಾವು ಕಂಡಿದ್ದೇವೆ. ಸ್ಥಳೀಯ ಸಮಸ್ಯೆಗಳಿಗೆ ದನಿಯಾಗಲು ಇಂದು ಹಳ್ಳಿ-ಹಳ್ಳಿಗಳಲ್ಲಿ ಕಮ್ಯುನಿಟಿ ರೇಡಿಯೋಗಳು ಕೆಲಸ ಮಾಡುತ್ತಿವೆ.
ಇಂದು ರೇಡಿಯೋ ಕೇವಲ ಹಳೆಯ ಟ್ರಾನ್ಸಿಸ್ಟರ್ ಪೆಟ್ಟಿಗೆಗಳಿಗೆ ಸೀಮಿತವಾಗಿಲ್ಲ. ಎಫ್.ಎಂ (FM) ಕ್ರಾಂತಿಯ ನಂತರ ಈಗ 'ಡಿಜಿಟಲ್ ರೇಡಿಯೋ' ಮತ್ತು 'ಪಾಡ್‌ಕಾಸ್ಟ್' (Podcast) ರೂಪದಲ್ಲಿ ಅದು ಪುನರ್ಜನ್ಮ ಪಡೆದಿದೆ. ಮೊಬೈಲ್ ಅಪ್ಲಿಕೇಶನ್‌ಗಳು, ಎಫ್.ಎಂ (FM) ಚಾನೆಲ್‌ಗಳು ಮತ್ತು ಪಾಡ್‌ಕಾಸ್ಟ್‌ಗಳ ಮೂಲಕ ಹೊಸ ತಲೆಮಾರಿನವರಿಗೂ ಹತ್ತಿರವಾಗಿದೆ. ನಗರ ಪ್ರದೇಶಗಳಲ್ಲಿ ಎಫ್.ಎಂ ಚಾನೆಲ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದವರಿಗೆ ಆಪ್ತ ಮಿತ್ರನಾಗಿವೆ. ಯುವ ಪೀಳಿಗೆಯು ಇಂದು ಪ್ರಯಾಣದ ಸಮಯದಲ್ಲಿ ಅಥವಾ ಕೆಲಸದ ನಡುವೆ ರೇಡಿಯೋ ಕೇಳುವುದನ್ನು ಹವ್ಯಾಸವಾಗಿಸಿಕೊಂಡಿದೆ. ಅನೇಕ ಜಾಗತಿಕ ತುರ್ತು ಸಂದರ್ಭಗಳಲ್ಲಿ ರೇಡಿಯೋ ಸುಳ್ಳು ಸುದ್ದಿಗಳ ಹಾವಳಿಯಿಲ್ಲದೆ ಅಧಿಕೃತ ಮಾಹಿತಿಯನ್ನು ಜನರಿಗೆ ತಲುಪಿಸಿ 'ವಿಶ್ವಾಸಾರ್ಹ ಮಾಧ್ಯಮ' ಎಂದು ಸಾಬೀತುಪಡಿಸಿದೆ.
ಮಾಧ್ಯಮಗಳ ಪೈಪೋಟಿಯ ನಡುವೆಯೂ ರೇಡಿಯೋ ತನ್ನ ಧ್ವನಿಯನ್ನು ಕಳೆದುಕೊಂಡಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಧ್ವನಿಯಾಗಿ, ಜ್ಞಾನದ ದೀವಿಗೆಯಾಗಿ ರೇಡಿಯೋ ಕಾರ್ಯನಿರ್ವಹಿಸುತ್ತಿದೆ. ರೇಡಿಯೋ ಮಾಧ್ಯಮವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ
"ಮಾತು ಬೆಳ್ಳಿ, ಮೌನ ಬಂಗಾರ" ಎಂಬ ಮಾತಿದೆ. ಆದರೆ ರೇಡಿಯೋ ವಿಷಯದಲ್ಲಿ "ಮಾತು ಮತ್ತು ಶಬ್ದಗಳೇ ಬಂಗಾರ". ಕಣ್ಣಿಗೆ ಕಾಣದಿದ್ದರೂ ಕಿವಿಯ ಮೂಲಕ ಮನಸ್ಸನ್ನು ತಲುಪುವ ರೇಡಿಯೋ, ಮನುಕುಲದ ಸಂವಹನ ಇತಿಹಾಸದಲ್ಲಿ ಒಂದು ಅವಿಭಾಜ್ಯ ಅಂಗ. ದೃಶ್ಯ ಮಾಧ್ಯಮಗಳು ಕಣ್ಣನ್ನು ಆವರಿಸಿಕೊಂಡರೆ, ಶ್ರವ್ಯ ಮಾಧ್ಯಮವಾದ ರೇಡಿಯೋ ಕಲ್ಪನಾ ಲೋಕವನ್ನು ವಿಸ್ತರಿಸುತ್ತದೆ. ರೇಡಿಯೋದಲ್ಲಿ ಸುದ್ದಿ ಓದುಗರ ಗಂಭೀರ ಧ್ವನಿ ಅಥವಾ ರೇಡಿಯೋ ಜಾಕಿಗಳ ಹರಟೆ ನಮಗೆ ಒಂಟಿತನವನ್ನು ದೂರ ಮಾಡುತ್ತವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಗಾಳಿಯ ಅಲೆಗಳ ಮೇಲೆ ತೇಲಿ ಬರುವ ಆ ಮಧುರ ಧ್ವನಿಗೆ ಪರ್ಯಾಯವಿಲ್ಲ.
ವನಜಾಕ್ಷಿ ಪಿ ಚೆಂಬ್ರಕಾನ

0 Comments