ಮಂಜೇಶ್ವರ : ಶತಮಾನವನ್ನು ಕಂಡಂತಹ ಕುಳೂರಿನ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಸಡಗರ ಸಂಭ್ರಮದಿಂದ ಜರಗಿತು. ಕಾರ್ಯಕ್ರಮದ ಉಧ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಕಾಸರಗೋಡಿನ ಕನ್ನಡ ನೆಲದಲ್ಲಿ ಹುಟ್ಟಿ ಮಹಾರಾಷ್ಟ್ರದಲ್ಲಿ ತನ್ನ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಿದ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಆತ್ಮೀಯ ಮಿತ್ರರಾದ ಕೊಡುಗೈ ದಾನಿ ಕೆ.ಕೆ. ಶೆಟ್ಟಿ ಕುತ್ತಿಕ್ಕಾರ್ ರವರು 'ಕುಳೂರು ಶಾಲೆಗೆ ಆಗಮಿಸಿದ್ದು ಋಣಾನುಬಂಧದಿಂದಲೇ ಆಗಿದೆ. ಸದಾಶಿವ ಶೆಟ್ಟಿಯವರಂತಹ ಶ್ರೇಷ್ಟರನ್ನು ಕೊಟ್ಟಂತಹ ಕುಳೂರು ಶಾಲೆಯು ಇನ್ನಷ್ಟು ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲಿ' ಎಂದು ಶುಭ ಕೋರಿದರು. ಕಾರ್ಯಕ್ರಮಕ್ಕೆ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ಧ್ವಜಾರೋಹಣಗೈಯುವ ಮೂಲಕ ಚಾಲನೆಯನ್ನಿತ್ತರು. ಕಾರ್ಯಕ್ರಮದ ಉದ್ಘಾಟನೆಯನ್ನು ಮೀಂಜ ಗ್ರಾಮ ಪಂಚಾಯತಿನ ಉಪಾಧ್ಯಕ್ಷೆಯಾಗಿರುವ ಉಷಾ ಪೂಂಜ ಮಾಣೂರು ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲರವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಶಾಲಾ ಹಳೆ ವಿದ್ಯಾರ್ಥಿ ಜಗದೀಶ್ ಶೆಟ್ಟಿ ಎಲಿಯಾನ ಹಾಗೂ ಕುಳೂರು ಶಾಲೆಯ ಮಾಜಿ ಮುಖ್ಯ ಶಿಕ್ಷಕ, ಪ್ರಸ್ತುತ ಮಧೂರು ಶಾಲೆಯ ಮುಖ್ಯ ಶಿಕ್ಷಕರಾದ ವಿನೋದ್ ಕುಮಾರ್ ಬಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿಯನ್ನು ಕಾಣುವ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಇಬ್ರಾಹಿಂ ಬಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾದ ಜಾರ್ಜ್ ಕ್ರಾಸ್ತ ಹಾಗೂ ಮೀಂಜ ಪಂಚಾಯತ್ ಪಿ.ಇ.ಸಿ. ಸೆಕ್ರೆಟರಿಯಾಗಿ ಕರ್ತವ್ಯ ನಿರ್ವಹಿಸಿದ ಮಜಿಬೈಲ್ ಶಾಲಾ ಮುಖ್ಯ ಶಿಕ್ಷಕರಾದ ಸುರೇಶ್ ಬಂಗೇರರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜೊತೆಗೆ ಶಾಲಾ ಹಳೆ ವಿದ್ಯಾರ್ಥಿಗಳಾದ ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ಸಬ್ ಇನ್ಸ್ಪೆಕ್ಟರ್ ಕೊರಗಪ್ಪ ಕುಳೂರು, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ವಿದ್ಯಾರ್ಥಿ ನಿಲಯಗಳಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮಾಧವ ಕೆ ಕುಳೂರು ಹಾಗೂ ಕಿನ್ನಿಗೋಳಿ ಮತ್ತು ಮೂಡಬಿದ್ರೆ ಶಾಲೆಗಳಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮ ಕೆ ಕುಳೂರು ಇವರಿಗೆ ಗೌರವಾರ್ಪಣೆ ಮಾಡಲಾಯಿತು.
ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ವಿವಿಧ ಸ್ಥಾನಗಳನ್ನು ಅಲಂಕರಿಸಿದ ಮೀಂಜ ಪಂಚಾಯತ್ ಉಪಾಧ್ಯಕ್ಷೆ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಉಷಾ ಪೂಂಜ ಮಾಣೂರು, ಕುಳೂರು ವಾರ್ಡ್ ಸದಸ್ಯೆ ಶರ್ಮಿಳಾ ಎಂ ಶೆಟ್ಟಿ ಚಾರ್ಲ ಹಾಗೂ ಕಳೆದ ಐದು ವರ್ಷಗಳಲ್ಲಿ ಕುಳೂರು ವಾರ್ಡ್ ಸದಸ್ಯರಾಗಿ ಶಾಲೆಗೆ ಪಂಚಾಯತಿನಿಂದ ಹಲವು ಅನುದಾನಗಳನ್ನು ದೊರಕಿಸಿ ಕೊಡಲು ಸಹಕರಿಸಿರುವ ಶಾಲಾ ಹಳೆ ವಿದ್ಯಾರ್ಥಿಯೂ ಆಗಿರುವ ಜನಾರ್ಧನ ಪೂಜಾರಿ ಕುಳೂರು ರವರನ್ನು ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಶಾಲಾ ಶಿಕ್ಷಕಿಯರಾದ ನಯನ ಎಂ ಹಾಗೂ ಅಶ್ವಿನಿ ಎಂ ಸನ್ಮಾನ ಪತ್ರವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಮೀಯಪದವು ವಿದ್ಯಾವರ್ಧಕ ಎ.ಯು.ಪಿ. ಶಾಲೆಯ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ನಾರಾಯಣ ನಾಯ್ಕ್ ನಡುಹಿತ್ಲು, ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಕವಿತಾ ದೇರಂಬಳ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಿಯಾಂಕ ಕೇಮಜಾಲು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ. ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳು, ಸ್ಥಳೀಯ ಅಂಗನವಾಡಿ ಪುಟಾಣಿಗಳು, ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಶಾಲಾ ಮಕ್ಕಳಿಂದ ಕಿರು ನಾಟಕ 'ಚಿನ್ನದ ಮಾಲೆ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯೆಯರಿಂದ ತುಳು ಕಿರು ನಾಟಕ 'ಕತ್ತಲೆ ಮಾಜಿಂಡ್' ಹಾಗೂ ನವಯುವಕ ಕಲಾವಿದೆರ್ ಚಿನಾಲ ಇವರಿಂದ ತುಳು ಸಾಮಾಜಿಕ ಹಾಸ್ಯ ನಾಟಕ 'ಕಡೀರ ಮಗೆ' ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

0 Comments