ಮಂಗಳೂರು: ಕಳೆದ ಕೆಲವು ದಿನಗಳಿಂದ ಕೆಲವು ಮಾಧ್ಯಮ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳಂತೆ ಕಾಸರಗೋಡು ಜಿಲ್ಲೆಯ ಕೂಳೂರು ಗ್ರಾಮದ ಪ್ರತಿಷ್ಠಿತ ಉದ್ಯಮಿಗಳು ಹಾಗೂ ಕೊಡುಗೈ ದಾನಿಗಳಾದ ಡಾ| ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಇವರ ಮೇಲೆ ನಡೆಯುತ್ತಿರುವ ಅಪಪ್ರಚಾರ ಹಾಗೂ ಇಲ್ಲ ಸಲ್ಲದ ಮಾನಹಾನಿ ಹಾಗೂ ಆರೋಪಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವ ನಡುವೆ ಕಾಸರಗೋಡಿನ ಕೆಲವು ಬಂಟ ಬಾಂಧವ ಪ್ರಮುಖರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಸದಾಶಿವ ಶೆಟ್ಟಿಗೆ ಬೆಂಬಲ ಸೂಚಿಸಿದ್ದಾರೆ.
'ಈ ವಿಚಾರ ತುಂಬಾ ಬೇಸರದ ಸಂಗತಿ' ಎಂದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ರಾಜರಾಜೇಶ್ವರಿ ದೇವಸ್ಥಾನ ದರ್ಬಾರ್ ಕಟ್ಟೆ ಇದರ ಆಡಳಿತ ಮೊಕೇಸರರಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು ಮಾತಾಡಿ, ”ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ಮನನೊಂದು ಕುಳೂರು ಕನ್ಯಾನ ಡಾ| ಸದಾಶಿವ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವುದು ಸಮಸ್ತ ಕಾಸರಗೋಡು ಜಿಲ್ಲೆಯ ಬಂಟಬಾಂಧವರಿಗೆ ಆಘಾತ ಉಂಟು ಮಾಡಿರುತ್ತದೆ. ಕಾಸರಗೋಡಿನ ಬಂಟರು ಎಲ್ಲರೂ ಒಗ್ಗಟ್ಟಿನಿಂದ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಆಗಿರುವ ನೋವಿನಲ್ಲಿ ನಾವು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿರುತ್ತೇವೆ“ ಎಂದರು.
'ಮುಂದಿನ ದಿನಗಳಲ್ಲಿ ಡಾ| ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಪೂರ್ಣ ಬೆಂಬಲವನ್ನು ಈ ಮೂಲಕ ನೀಡುತ್ತೇವೆ. ಸಮಾಜ ಬಾಂಧವರಲ್ಲಿ ವಿನಂತಿಯೇನೆಂದರೆ ಇಂದಿನವರೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಸಾಮರಸ್ಯದಿಂದ ಹಾಗೂ ಸೌಹಾರ್ದತೆಯಿಂದ ನಡೆದುಕೊಂಡು ಬಂದಿರುತ್ತೇವೆ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ನಡೆದುಕೊಳ್ಳಬೇಕಾಗಿ ಎಲ್ಲಾ ಸಮಾಜ ಭಾಂದವರಲ್ಲಿ ಕಳಕಳಿಯಿಂದ ವಿನಯಪೂರ್ವಕವಾಗಿ ವಿನಂತಿಸುತ್ತೇವೆ' ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೋಹನ ರೈ ಕಯ್ಯಾರು, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರು, ಕಾರ್ತಿಕ್ ಶೆಟ್ಟಿ ಮಜ್ಜಿಬೈಲ್, ಸುರೇಶ್ ಶೆಟ್ಟಿ ಕುಂಜತ್ತೂರು ಉಪಸ್ಥಿತರಿದ್ದರು.

0 Comments