"ಕಾಡಿದ್ದರೆ ನಾಡು, ನಾಡಿದ್ದರೆ ನಾವು" ಎಂಬ ಗಾದೆ ಮಾತು ಅರಣ್ಯಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ಮಾತಾಗದೆ ಕೃತಿಯಾಗಬೇಕಿದೆ. ಅರಣ್ಯಗಳು ಕೇವಲ ಮರಗಳ ಗುಂಪಲ್ಲ, ಅವು ಭೂಮಿಯ ಶ್ವಾಸಕೋಶಗಳು. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಅರಣ್ಯಗಳ ಪಾತ್ರ ಅತಿ ದೊಡ್ಡದು. ಅರಣ್ಯಗಳು ಕೇವಲ ಮರಗಿಡಗಳ ಸಮೂಹವಲ್ಲ; ಅವು ಭೂಮಿಯ ಮೇಲಿನ ಸಮಸ್ತ ಜೀವರಾಶಿಗಳ ಜೀವನಾಡಿ.
ಪರಿಸರ ಸಂರಕ್ಷಣೆಯಲ್ಲಿ ಅರಣ್ಯಗಳ ಪಾತ್ರ ಮತ್ತು ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 21ರಂದು ವಿಶ್ವದಾದ್ಯಂತ 'ಅಂತರರಾಷ್ಟ್ರೀಯ ಅರಣ್ಯ ದಿನ'ವನ್ನು ಆಚರಿಸಲಾಗುತ್ತದೆ. 1971 ರಿಂದ "ವಿಶ್ವ ಅರಣ್ಯ ದಿನ"ವಾಗಿ ಇದನ್ನು ಗುರುತಿಸಲಾಗುತ್ತಿತ್ತು. 2012 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾರ್ಚ್ 21 ಅನ್ನು 'ಅಂತರರಾಷ್ಟ್ರೀಯ ಅರಣ್ಯ ದಿನ' ಎಂದು ಘೋಷಿಸಿತು. ಇದರ ಮೊದಲ ಅಧಿಕೃತ ಆಚರಣೆಯು 2013 ರ ಮಾರ್ಚ್ 21 ರಂದು ನಡೆಯಿತು. 2026ರ 'ಅಂತರರಾಷ್ಟ್ರೀಯ ಅರಣ್ಯ ದಿನ'ದ ಘೋಷವಾಕ್ಯ "ಅರಣ್ಯಗಳು ಮತ್ತು ಆರ್ಥಿಕತೆಗಳು" (Forests and Economies) ಎಂಬುದಾಗಿದೆ. ಕಾಡು ಕೇವಲ ಪರಿಸರಕ್ಕೆ ಮಾತ್ರವಲ್ಲದೆ, ಜಗತ್ತಿನ ಆರ್ಥಿಕ ಸಮೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಜೀವನೋಪಾಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಈ ಥೀಮ್ ಎತ್ತಿ ತೋರಿಸುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮನುಷ್ಯನ ಅತಿಯಾದ ಆಸೆ ಮತ್ತು ನಗರೀಕರಣದಿಂದಾಗಿ ಪ್ರತಿ ನಿಮಿಷಕ್ಕೆ ಲಕ್ಷಾಂತರ ಎಕರೆ ಅರಣ್ಯ ನಾಶವಾಗುತ್ತಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ (Global Warming), ಅಕಾಲಿಕ ಮಳೆ ಮತ್ತು ಭೀಕರ ಬರಗಾಲಕ್ಕೆ ಕಾಡುಗಳ ನಾಶವೇ ಮುಖ್ಯ ಕಾರಣವಾಗಿದೆ.
ಭೂಮಿಯ ಮೇಲಿನ ಸುಮಾರು 80% ರಷ್ಟು ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳಿಗೆ ಅರಣ್ಯಗಳೇ ಆಶ್ರಯತಾಣ. ಅರಣ್ಯಗಳು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಮೂಲಕ ಭೂಮಿಯ ತಾಪಮಾನವನ್ನು ಸಮತೋಲನದಲ್ಲಿಡುತ್ತವೆ. ಮಳೆ ತರಿಸುವಲ್ಲಿ, ಭೂ ಸವಕಳಿಯನ್ನು ತಡೆಯುವಲ್ಲಿ ಮತ್ತು ಭೂಗತ ಜಲಮಟ್ಟವನ್ನು ಹೆಚ್ಚಿಸುವಲ್ಲಿ ಮರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟೇ ಅಲ್ಲದೆ, ಲಕ್ಷಾಂತರ ಜೀವರಾಶಿಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಕಾಡುಗಳೇ ಆಶ್ರಯತಾಣಗಳಾಗಿವೆ. ಅರಣ್ಯಗಳು ನಮಗೆ ಕೇವಲ ಆಮ್ಲಜನಕ ನೀಡುವುದಿಲ್ಲ, ಬದಲಿಗೆ:
ಜೀವನೋಪಾಯ: ಜಗತ್ತಿನಾದ್ಯಂತ ಕೋಟ್ಯಂತರ ಜನರು ಆಹಾರ, ಔಷಧ ಮತ್ತು ಉದ್ಯೋಗಕ್ಕಾಗಿ ನೇರವಾಗಿ ಅರಣ್ಯಗಳ ಮೇಲೆ ಅವಲಂಬಿತರಾಗಿದ್ದಾರೆ. ಅರಣ್ಯಗಳು ಕೇವಲ ಪರಿಸರವನ್ನಷ್ಟೇ ಅಲ್ಲದೆ, ದೇಶದ ಆರ್ಥಿಕತೆಯನ್ನು ಕೂಡಾ ಬಲಪಡಿಸುತ್ತವೆ. ಅರಣ್ಯ ಆಧಾರಿತ ಉದ್ಯಮಗಳು, ಗಿಡಮೂಲಿಕೆಗಳ ಮಾರಾಟ ಮತ್ತು ಪ್ರವಾಸೋದ್ಯಮದ ಮೂಲಕ ಕೋಟ್ಯಂತರ ಜನರು ಜೀವನೋಪಾಯವನ್ನು ಕಂಡುಕೊಂಡಿದ್ದಾರೆ
ಜಲ ಸಂರಕ್ಷಣೆ: ಮಳೆ ತರಿಸುವಲ್ಲಿ ಮತ್ತು ಭೂಗತ ಜಲಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಮರಗಳ ಪಾತ್ರ ದೊಡ್ಡದು.
ಔಷಧೀಯ ಸಂಪತ್ತು: ನಾವು ಬಳಸುವ ಆಧುನಿಕ ಔಷಧಿಗಳಲ್ಲಿ ಶೇ. 25ರಷ್ಟು ಅರಣ್ಯ ಮೂಲದ ಸಸ್ಯಗಳಿಂದ ಬಂದವುಗಳಾಗಿವೆ.
ಆರ್ಥಿಕ ಪ್ರಗತಿ: ಸುಸ್ಥಿರ ಅರಣ್ಯ ನಿರ್ವಹಣೆಯು ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ಮೂಲಕ ದೇಶದ ಜಿಡಿಪಿಗೆ (GDP) ದೊಡ್ಡ ಕೊಡುಗೆ ನೀಡುತ್ತದೆ.
ಕೇವಲ ಫೋಟೋ ತೆಗೆಸಿಕೊಳ್ಳಲು ಗಿಡ ನೆಡುವುದಕ್ಕಿಂತ, ಅದನ್ನು ಮಕ್ಕಳಂತೆ ಪೋಷಿಸುವ ಸಂಕಲ್ಪ ಮಾಡಬೇಕಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದೊಂದು ಗಿಡವನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕಾಗಿದೆ.
ಮನೆಗೊಂದು ಮರ: ನಗರ ಪ್ರದೇಶಗಳಲ್ಲಿ ಜಾಗದ ಅಭಾವವಿದ್ದರೂ 'ಕಿಚನ್ ಗಾರ್ಡನ್' ಅಥವಾ ಕುಂಡಗಳಲ್ಲಿ ಗಿಡ ಬೆಳೆಸುವ ಮೂಲಕ ಹಸಿರನ್ನು ಉಳಿಸಬಹುದು.
ಪ್ಲಾಸ್ಟಿಕ್ ಮುಕ್ತ ಕಾಡು: ಪ್ರವಾಸಿ ತಾಣಗಳಾದ ಕಾಡುಗಳಿಗೆ ಹೋದಾಗ ಪ್ಲಾಸ್ಟಿಕ್ ಎಸೆಯದೆ ಪರಿಸರ ಪ್ರಜ್ಞೆ ಮೆರೆಯಬೇಕು.
ಅರಿವು ಮೂಡಿಸುವುದು: ಶಾಲಾ-ಕಾಲೇಜುಗಳಲ್ಲಿ ಮತ್ತು ಸಮಾಜದಲ್ಲಿ ಕಾಡಿನ ಮಹತ್ವದ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು. ಕಾಗದ ಮತ್ತು ಮರದ ಉತ್ಪನ್ನಗಳ ಮಿತ ಬಳಕೆ ಹಾಗೂ ಮರುಬಳಕೆ ಮಾಡುವುದು. ಅರಣ್ಯ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಅತೀ ಅಗತ್ಯವಾಗಿದೆ. ಕಾಡುಗಳಲ್ಲಿ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ವಹಿಸುವುದು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ.
ಇಂದಿನ ಆಧುನಿಕ ಯುಗದಲ್ಲಿ ನಗರೀಕರಣ, ಕೈಗಾರಿಕೀಕರಣ ಮತ್ತು ಅತಿಯಾದ ಜನಸಂಖ್ಯೆಯ ಕಾರಣದಿಂದಾಗಿ ಕಾಡುಗಳು ವೇಗವಾಗಿ ನಾಶವಾಗುತ್ತಿವೆ. ಅರಣ್ಯ ನಾಶದಿಂದಾಗಿ ಹವಾಮಾನ ವೈಪರೀತ್ಯ ಮತ್ತು ವನ್ಯಜೀವಿಗಳು ನಾಡಿಗೆ ಬರುವಂತಹ ಸಮಸ್ಯೆಗಳು ಎದುರಾಗುತ್ತಿವೆ. ಕಾಡು ಕಣ್ಮರೆಯಾದರೆ ಮಾನವಕುಲದ ಅಸ್ತಿತ್ವಕ್ಕೇ ಧಕ್ಕೆ ಬರುತ್ತದೆ.
ಅರಣ್ಯಗಳು ಪ್ರಕೃತಿ ನಮಗೆ ನೀಡಿದ ಅಮೂಲ್ಯವಾದ ಕೊಡುಗೆ. ಅರಣ್ಯಗಳ ಸಂರಕ್ಷಣೆ ಎಂಬುದು ಕೇವಲ ಸರ್ಕಾರದ ಅಥವಾ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ನಾವು ಇಂದು ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸಿದರೆ, ನಾಳೆ ನಮ್ಮ ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧ ಗಾಳಿ ಮತ್ತು ಕುಡಿಯಲು ನೀರಿಲ್ಲದಂತಾಗುತ್ತದೆ. ಇಂದಿನ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬೆಳೆಸಬೇಕು. ನಾವು ಇಂದು ನೆಡುವ ಒಂದು ಗಿಡ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ನೆರಳನ್ನು ನೀಡುತ್ತದೆ. ಪರಿಸರವನ್ನು ಉಳಿಸುವುದು ಎಂದರೆ ನಮ್ಮನ್ನು ನಾವು ಉಳಿಸಿಕೊಂಡಂತೆ. ಆದ್ದರಿಂದ 'ಹಸಿರು ಭೂಮಿ, ಸುಂದರ ಭೂಮಿ' ಎಂಬ ಗುರಿಯೊಂದಿಗೆ ಅರಣ್ಯಗಳನ್ನು ಉಳಿಸೋಣ, ಬೆಳೆಸೋಣ. ನಾವು ಮುಂದಿನ ಪೀಳಿಗೆಗೆ ಆಸ್ತಿ-ಅಂತಸ್ತುಗಳನ್ನು ಬಿಟ್ಟು ಹೋಗದಿದ್ದರೂ ಪರವಾಗಿಲ್ಲ, ಅವರು ಉಸಿರಾಡಲು ಶುದ್ಧ ಗಾಳಿ ಮತ್ತು ಕುಡಿಯಲು ನೀರು ನೀಡುವ 'ಹಸಿರು ಹೊದಿಕೆ'ಯನ್ನು ಉಳಿಸಿಕೊಡೋಣ.
ಸಂಗ್ರಹ ಲೇಖನ - ವನಜಾಕ್ಷಿ ಪಿ ಚೆಂಬ್ರಕಾನ

0 Comments