'ಇಂಗ್ಲೆಂಡ್ ನ ಹ್ಯಾಂಪ್ ಶೈರ್ ಫ್ಲೀಟ್ ನಗರಸಭೆ ಚುನಾವಣೆಯಲ್ಲಿ ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಸತತ ಮೂರನೇ ಬಾರಿ ಭರ್ಜರಿ ಗೆಲುವು ಸಾಧಿಸಿದ್ದು, ಸ್ಥಳೀಯ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಬಲಿಷ್ಠ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರು ಜಾಗತಿಕ ಫಾರ್ಮಾಸ್ಕೂಟಿಕಲ್ ಮತ್ತು ಕ್ಲಿನಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಯುನೈಟೆಡ್ ಕಿಂಗ್ ಡಮ್, ಭಾರತ, ಮಧ್ಯಪ್ರಾಚ್ಯ ಮತ್ತು ಅಮೆರಿಕಾದಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. 2001ರಲ್ಲೇ ಯೋಗ ಮತ್ತು ಆಯುರ್ವೇದ ಕುರಿತ ಕ್ಲಿನಿಕಲ್ ಸಂಶೋಧನೆ ಆರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅಡಕೆಯ ಕ್ಯಾನ್ಸರ್‌ಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮಹತ್ವದ ಅಧ್ಯಯನಗಳನ್ನು ಕೈಗೊಂಡಿದ್ದಾರೆ.
ಬ್ರಿಟಿಷ್ ಸಂಸತ್ತಿನಲ್ಲಿ ಭಾರತ - ಯುಕೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕುಮಾರ್ ಅವರು ಸಕ್ರಿಯ ಪಾತ್ರವಹಿಸಿದ್ದಾರೆ. ಸೌತ್ ಹಾಲ್‌ನ ಮಾಜಿ ಸಂಸದ ವೀರೇಂದ್ರ ಶರ್ಮಾ ಸೇರಿದಂತೆ ಗಣ್ಯರೊಂದಿಗೆ 'ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಸಂಸತ್ತಿನ ಆವರಣದಲ್ಲಿ ಆಯೋಜಿಸಿದ ಉದ್ಯಮ ಸಭೆಗಳಲ್ಲಿ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ನಾಯಕರು ಮತ್ತು ಜಾಗತಿಕ ಹೂಡಿಕೆದಾರರು ಭಾಗವಹಿಸಿದ್ದಾರೆ. ಮೂಲತಃ ಕಾಸರಗೋಡಿನ ಕುಂಟಿಕಾನಮಠದ ಕುಮಾರ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಬಿ ಫಾರ್ಮಾ ಪದವಿ ಪಡೆದು, ನಂತರ ಲಂಡನ್‌ನಲ್ಲಿ ಎಂ.ಬಿ.ಎ ಪೂರ್ಣಗೊಳಿಸಿದ್ದಾರೆ. ಅವರು ಯುಕೆಯ ಅರಸ್ ಮಾರ್ಕೆಟಿಂಗ್ ಹಾಗೂ ಅಮೆರಿಕದ ಅರಸ್ ಮಾರ್ಕೆಟಿಂಗ್ ಎಲ್ಎಲ್‌ಸಿ ಸಂಸ್ಥೆಗಳ ನಿರ್ದೇಶಕರಾಗಿದ್ದಾರೆ.
ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ಅವರ ಪುತ್ರರಾಗಿರುವ ಅವರು ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. 500 ವರ್ಷಗಳ ಇತಿಹಾಸವಿರುವ ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಆರಾಧನೆ, ಜೀರ್ಣೋದ್ಧಾರ, ಆಡಳಿತದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಮಂತ್ರಾಲಯ ಪರಿಮಳ ಪ್ರಶಸ್ತಿ ದೊರೆತಿವೆ. ಜೊತೆಗೆ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಯೂರೋಪಿನಾದ್ಯಂತ ಕನ್ನಡ ಸಂಸ್ಕೃತಿಯನ್ನು ಹರಡುತ್ತಿದ್ದಾರೆ.
ಫಾರ್ಮಾ ಉದ್ಯಮ, ವ್ಯವಸ್ಥಾಪನಾ ಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯ ವಿಷಯಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ. ಫಾರ್ಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶ್ವ ಫಾರ್ಮಾಟಸ್ಟ್ ದಿನದಂದು ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಇಂಡಿಯನ್ ಅಸೋಸಿಯೇಷನ್ ವತಿಯಿಂದ ಕುಮಾರ್ ಕುಂಟಿಕಾನಮಠ ಅವರನ್ನು ಗೌರವಿಸಲಾಗಿದೆ.


0 Comments