ಕಾಸರಗೋಡು : ಚುನಾವಣಾ ಫಲಿತಾಂಶ ಹೊರಬಂದ ನಂತರ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಬಿಜೆಪಿ ಕಾರ್ಯಕರ್ತರ ಮಧ್ಯೆ ಗೊಂದಲ ಮೂಡಿಸಲು ಮತ್ತು ಅವರನ್ನು ಪ್ರಚೋದಿಸಿ ನಾಡಿನ ಸಾಮುದಾಯಿಕ ಸೌಹಾರ್ದತೆಯನ್ನು ಹಾಳುಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ. ಎಲ್. ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ.
ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹೊಂದಿದ್ದ ಕರ್ನಾಟಕದ ಶಾಸಕರ ನೇತೃತ್ವದಲ್ಲಿ ಈ ಬಾರಿ ಅತ್ಯುತ್ತಮ ಚುನಾವಣಾ ಕಾರ್ಯ ಚಟುವಟಿಕೆಗಳು ನಡೆದಿವೆ. ಮಂಜೇಶ್ವರದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚಿನ ಮತಗಳನ್ನು ಈ ಬಾರಿ ಬಿಜೆಪಿ ಗಳಿಸಿದೆ. ಕಾಸರಗೋಡು ಕ್ಷೇತ್ರದಲ್ಲೂ ಬಿಜೆಪಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಕೇರಳದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ ಕ್ಷೇತ್ರಗಳ ಪಟ್ಟಿಯಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ಸೇರಿವೆ. ಹಾಗಾಗಿ, ಈಗ ಹರಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ.
ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಫ್ಲೆಕ್ಸ್ ಅನ್ನು ಸ್ಫೋಟಕ ವಸ್ತುಗಳನ್ನು ಬಳಸಿ ನಾಶಪಡಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ, ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಜಾಗರೂಕರಾಗಿರಬೇಕು. ಕಾಸರಗೋಡು ಬಿಜೆಪಿಗೆ ಸಂಬಂಧಿಸಿದಂತೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ, ಕಾನೂನು ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅಶ್ವಿನಿ ತಿಳಿಸಿದರು.

0 Comments