ತಿರುವನಂತಪುರ : ಈ ಬಾರಿಯ ಕೇರಳ ವಿಧಾನ ಸಭೆಯಲ್ಲಿ ಬಹುಮತ ಗಳಿಸಿಕೊಂಡು ಅಧಿಕಾರಕ್ಕೆ ಬಂದ ಐಕ್ಯರಂಗ ಬಹು ಸಮಯದ ಚರ್ಚೆಯ ಬಳಿಕ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಡೆಸಿ ಕಳೆದ ವಿಪಕ್ಷ ನಾಯಕ ವಿ.ಡಿ.ಸತೀಶರನ್ನು 13ನೇ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಎಐಸಿಸಿ ಪ್ರಮುಖರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ನಡೆದ ಆಯ್ಕೆ ಕ್ರಮದ ಬಳಿಕ ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೀಪಾದಾಸ್ ಮುನ್ಶಿ ನೂತನ ಮುಖ್ಯ ಮಂತ್ರಿಯನ್ನು ಘೋಷಿಸಿದರು. ಜಯರಾಮ್ ರಮೇಶ್ ಮೊದಲಾದ ನೇತಾರರು ಘೋಷ್ಠಿಯಲ್ಲಿದ್ದರು.
ಕೇರಳದಲ್ಲಿ ಐಕ್ಯರಂಗ ಬಹುಮತ ಸಾಬೀತುಗೊಂಡ ಬಳಿಕ ಕೆ.ಸಿ.ವೇಣುಗೋಪಾಲ್, ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಲ ಎಂಬ ಮೂವರು ಪ್ರಮುಖ ನಾಯಕರ ಹೆಸರು ಮುಖ್ಯಮಂತ್ರಿ ಗಾದಿಗೆ ಸೂಚಿತವಾಗಿತ್ತು. ಅದರಲ್ಲೂ ಕೆ.ಸಿ.ವೇಣುಗೋಪಾಲ್ ಗೆ ಶಾಸಕರ ಹೆಚ್ಚಿನ ಬೆಂಬಲ ಕಂಡು ಬಂದಿತ್ತು. ಬಳಿಕ ವಿ.ಡಿ.ಸತೀಶನ್ ಬೆಂಬಲಿಗರು ಮುಖ್ಯಮಂತ್ರಿ ಪದವಿ ಆಗ್ರಹಿಸಿ ಬೀದಿಗಿಳಿದಿದ್ದು. ಇದೀಗ ನಾಟಕೀಯ ಸನ್ನಿವೇಶಕ್ಕೆ ಅಂತಿಮ ತೆರೆ ಬಿದ್ದು ಮುಖ್ಯಮಂತ್ರಿ ಪದವಿಗೆ ವಿ.ಡಿ.ಸತೀಶನ್ ಅವರ ಹೆಸರು ಘೋಷಣೆಯಾಗಿದೆ.
ವಡಶ್ಶೇರಿ ದಾಮೋದರನ್ ಸತೀಶನ್ ಎಂಬ ಅಪ್ರತಿಮ ಕಾಂಗ್ರೆಸ್ ನಾಯಕ ಕಳೆದ ವಿಪಕ್ಷ ನೇತಾರನಾಗಿ ತನ್ನ ಸ್ಪಷ್ಟ ನಿಲುವು, ದುರಾಡಳಿತಕ್ಕೆದುರಾಗಿ ಹೋರಾಟ ನಡೆಸಿದ್ದು ಗಮನಾರ್ಹವಾಗಿತ್ತು. ಈ ಬಾರಿ ಅಧಿಕಾರದ ಚುಕ್ಕಾಣಿ ಇವರಿಗೆ ನೀಡಬೇಕೆಂಬುದು ಬಹುಜನ ಆಶಯವಾಗಿತ್ತು. ವಿ.ಡಿ.ಸತೀಶನ್ ಅವರು ಕೆ. ದಾಮೋದರ ಮೆನನ್ ಮತ್ತು ವಿ. ವಿಲಾಸಿನಿ ಅಮ್ಮ ದಂಪತಿಗಳ ಪುತ್ರನಾಗಿ ಕೊಚ್ಚಿಯ ನೆಟ್ಟೂರಿನಲ್ಲಿ 31 ಮೇ 1964 ರಂದು ನಾಯರ್ ಕುಟುಂಬದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಣಂಗಾಡ್ ಹೈಸ್ಕೂಲ್‌ನಿಂದ ಪೂರ್ಣಗೊಳಿಸಿದ ಅವರು ತೇವರದ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ರಾಜಗಿರಿ ಕಾಲೇಜ್ ಆಫ್ ಸೋಶಿಯಲ್ ಸೈನ್ಸಸ್‌ನಿಂದ ಸಮಾಜ ಕಾರ್ಯದಲ್ಲಿ (MSW) ಸ್ನಾತಕೋತ್ತರ ಪದವಿ, ನಂತರ ಕೇರಳ ಲಾ ಅಕಾಡೆಮಿಯ ಕಾನೂನು ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಲಾಸ್ (LLB) ಮತ್ತು ತಿರುವನಂತಪುರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಮಾಸ್ಟರ್ ಆಫ್ ಲಾಸ್ (LLM) ಅನ್ನು ಪೂರ್ಣಗೊಳಿಸಿ ವಕೀಲಿ ವೃತ್ತಿಗೇರಿದರು. ಸರಿಸುಮಾರು 10 ವರ್ಷಗಳ ಕಾಲ, ಕೇರಳ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ನಡೆಸಿದ ಸತೀಶನ್ ಅವರು ಆರ್ ಲಕ್ಷ್ಮಿ ಪ್ರಿಯಾ ಎಂಬರನ್ನು ವಿವಾಹಿತರಾಗಿ ಉನ್ನಿಮಾಯ ಎಂಬ ಪುತ್ರಿಯ ಜತೆ ಸಂತೃಪ್ತ ಸಂಸಾರ ಕಂಡುಕೊಂಡರು. 1996 ರಲ್ಲಿ ಕಮ್ಯುನಿಸ್ಟ್ ಭದ್ರಕೋಟೆಯಾಗಿದ್ದ ಪರವೂರಿನಿಂದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಪಿ.ರಾಜು ಅವರನ್ನು ಸೋಲಿಸಿ ವಿ.ಡಿ.ಸತೀಶನ್ ಅವರ ರಾಜಕೀಯ ಚೊಚ್ಚಲ ಪ್ರವೇಶವಾಯಿತು.
ಕೇರಳ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಸತೀಶನ್ 2001 ರಲ್ಲಿ ಮೊದಲ ಬಾರಿಗೆ ಕೇರಳ ವಿಧಾನಸಭೆಗೆ ಆಯ್ಕೆಯಾದರು. 2006 ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ, ಅವರು ಕೆ.ಎಂ. ದಿನಕರನ್ ವಿರುದ್ಧ ಪರವೂರ್ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆದ್ದರು. 2011 ರಲ್ಲಿ ಕೇರಳದ ಮುಂದಿನ ವಿಧಾನಸಭೆಯಲ್ಲಿ, ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪನ್ನಯನ್ ರವೀಂದ್ರನ್ ಅವರನ್ನು 11,349 ಮತಗಳಿಂದ ಸೋಲಿಸುವ ಮೂಲಕ ಮತ್ತೊಮ್ಮೆ ಆಯ್ಕೆಯಾದರು. 2016 ರಲ್ಲಿ, ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಶಾರದ ಮೋಹನ್ ಅವರನ್ನು 20,634 ಮತಗಳ ಅಂತರದಿಂದ ಸೋಲಿಸುವ ಮೂಲಕ ಪರವೂರು ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆಯಾದರು. ಅವರು 12 ನೇ ಅಸೆಂಬ್ಲಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದರು. 2021 ರಲ್ಲಿ, ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಎಂ. ಟಿ. ನಿಕ್ಸನ್ ಅವರನ್ನು 22000 ಮತಗಳ ಅಂತರದಿಂದ ಸೋಲಿಸುವ ಮೂಲಕ ಪರವೂರು ಕ್ಷೇತ್ರದಿಂದ ಐದನೇ ಬಾರಿಗೆ ಕೇರಳ ವಿಧಾನಸಭೆಗೆ ಮತ್ತೊಮ್ಮೆ ಆಯ್ಕೆಯಾದರು. 22 ಮೇ 2021 ರಂದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 12ನೇ ಕೇರಳ ವಿಧಾನಸಭೆಯಲ್ಲಿ ವಿ.ಡಿ.ಸತೀಶನ್ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಘೋಷಿಸಿತು.
2026 ಕೇರಳ ವಿಧಾನಸಭೆ ಚುನಾವಣೆ
2026 ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ, 140 ಸದಸ್ಯರ ಅಸೆಂಬ್ಲಿಯಲ್ಲಿ 102 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಗಳಿಸುವ ಮೂಲಕ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅನ್ನು ಸತೀಶನ್ ಅವರು ಪ್ರಚಂಡ ವಿಜಯದತ್ತ ಮುನ್ನಡೆಸಿದರು. ಈ ವಿಜಯವು ತನ್ನ ಹತ್ತು ವರ್ಷಗಳ ಅಧಿಕಾರಾವಧಿಯ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಮುನ್ನಡೆಸಿತ್ತು.

0 Comments