Ticker

6/recent/ticker-posts

Ad Code

ಇದು ಕೇವಲ ಮತಗಳ ಚುನಾವಣೆಯಲ್ಲ; ಬಂಗಾಳದ ಸ್ತ್ರೀಯರ ಸುರಕ್ಷತೆಗಾಗಿ ಹೋರಾಟ : ರತ್ನಾ ದೇಬ್ನಾಥ್

 

ಕೋಲ್ಕತ್ತಾ : 'ಇದು ಮತಗಳ ಚುನಾವಣೆಯಲ್ಲ, ಬಂಗಾಳದ ಸ್ತ್ರೀಯರ ಸುರಕ್ಷತೆಗಾಗಿ ಹೋರಾಟ' ಎಂದು ಪಾಣಿಹಟಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ, ಆರ್‌ಜಿ ಕರ್ ಅತ್ಯಾಚಾರ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಇದು ಕೇವಲ ಮತಗಳಿಂದ ಗೆದ್ದು ಬೀಗುವ ಚುನಾವಣೆಯಲ್ಲ. ಇದು ನನ್ನ ಮಗಳ ನ್ಯಾಯಕ್ಕಾಗಿ ಹೋರಾಟ, ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೋರಾಟ ಮಾಡುವ ಚುನಾವಣೆ. ಪಾಣಿಹಟಿಯ ಜನರು ನನ್ನೊಂದಿಗಿದ್ದಾರೆ. ಈ ಮತಗಳು ನನ್ನ ಮಗಳಿಗಾಗಿ, ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಜನರ ಒಳಿತಿಗಾಗಿ ಹಾಗೂ ಸುದೀರ್ಘ ಕಾಲದಿಂದ ಈ ಸರ್ಕಾರದ ಅಡಿಯಲ್ಲಿ ಸಿಲುಕಿ ಬಳಲುತ್ತಿರುವ ಮಹಿಳೆಯರಿಗಾಗಿ' ಎಂದಿದ್ದಾರೆ.

'ಪಾಣಿಹಟಿಯ ಈ ಯಶಸ್ಸು ವೈಯಕ್ತಿಕ ಗೆಲುವಲ್ಲ, ಬದಲಾಗಿ ಪಶ್ಚಿಮ ಬಂಗಾಳದಲ್ಲಿ ಬದಲಾಗುತ್ತಿರುವ ರಾಜಕೀಯ ಅಲೆ ಹಾಗೂ ಬಂಗಾಳದ ಜನರ ಸಾಮೂಹಿಕ ಹೋರಾಟವಾಗಿದೆ. ಐತಿಹಾಸಿಕವಾಗಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಎರಡನೇ ಹಂತದ ಚುನಾವಣೆಯಲ್ಲಿ ಶೇ.91.66ರಷ್ಟು ಮತದಾನವಾಗಿದೆ. ಈ ಫಲಿತಾಂಶದಿಂದ ಪಾಣಿಹಟಿಯಲ್ಲಿ ಮತದಾರರ ಆದ್ಯತೆಯಲ್ಲಿ ಬದಲಾವಣೆಯಾಗಿರುವುದು ಎದ್ದು ಕಾಣುತ್ತಿದೆ. ಬಂಗಾಳದ ಜನರು ಟಿಎಂಸಿಯಿಂದ ಬೇಸತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಪ್ರಚಾರದ ಸಮಯದಲ್ಲಿ ಪ್ರತಿಸ್ಪರ್ಧಿ ಪಕ್ಷದ ಕಾರ್ಯಕರ್ತರಿಂದ ಕಿರುಕುಳ ಮತ್ತು ಬೆದರಿಕೆಯನ್ನು ಎದುರಿಸುತ್ತಿದ್ದರೂ ಕೂಡ ರತ್ನಾ ದೇಬ್ನಾಥ್ ಅವರು ಧೃತಿಗೆಡಲಿಲ್ಲ.  13 ಸುತ್ತುಗಳ ಇವಿಎಂ ಎಣಿಕೆಯ ನಂತರದ ಅಂತಿಮ ಫಲಿತಾಂಶಗಳ ಪ್ರಕಾರ, ರತ್ನಾ ದೇಬ್ನಾಥ್ ಅವರು ಒಟ್ಟು 87,977 ಮತಗಳನ್ನು ಗಳಿಸಿದ್ದು, ತೃಣಮೂಲ ಕಾಂಗ್ರೆಸ್‌ನ ತೀರ್ಥಂಕರ ಘೋಷ್ 59,141 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ  28,836 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

Post a Comment

0 Comments