ಪೆರ್ಲ : ಶೃಂಗೇರಿ ಮಠದ ಕಿರಿಯ ಮಠಾಧೀಶ ವಿಧುಶೇಖರ ಭಾರತಿ ಸ್ವಾಮೀಜಿ 7 ದಿನಗಳ ಕೇರಳ ಭೇಟಿಗಾಗಿ ಗುರುವಾರ ಸಂಜೆ ಪುತ್ತೂರು ಪಾಣಾಜೆ ಮೂಲಕ ಕೇರಳ ಕರ್ನಾಟಕ ಗಡಿ ಸ್ವರ್ಗಕ್ಕೆ ಆಗಮಿಸಿದಾಗ ಕೇರಳ ರಾಜ್ಯ ಪೊಲೀಸ್ ವರಿಷ್ಠಾದಿಕಾರಿ, ಡಿಜಿಪಿ ರಾವಡ ಆಜಾದ್ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯ ಸರಕಾರದ ಪರವಾಗಿ ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಲಾಯಿತು. ಡಿಐಜಿ ಯತೀಶ್ಚಂದ್ರ ಐಪಿಎಸ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸ್ವರ್ಗ ಗಡಿ ತಲುಪಿದ್ದರು.
ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದ ಪ್ರಧಾನ ಅರ್ಚಕ ಬೆಲ್ಲ ಮಾಧವ ಭಟ್, ಶ್ರೀಹರಿ ಭಟ್ ಸಜಂಗದ್ದೆ, ಹೃಷಿಕೇಶ ವಿ.ಎಸ್, ವಿವೇಕ ಬಿ.ಕೆ. ಮತ್ತಿರರ ನೇತೃತ್ವದಲ್ಲಿ ಜಗದ್ಗುರುಗಳಿಗೆ ತುಳಸಿ ಮಾಲೆ ಹಾಕಿ ಸ್ವಾಗತಿಸಲಾಯಿತು. ಸ್ವಾಮೀಜಿಗಳು ಡಿಜಿಪಿ ಅವರಿಗೆ ಶಾಲು ಹಾಕಿ ಮಂತ್ರಾಕ್ಷತೆ ನೀಡಿದರು.
ಕಿರಿಯ ಮಠಾಧೀಶರು ಕೋಝಿಕ್ಕೋಡ್‌ನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇರಳಕ್ಕೆ ಆಗಮಿಸಿದ್ದಾರೆ. ಮೇ 10ರಿಂದ 13ರವರೆಗೆ ಅವರು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಚಟ್ಟಂಚಾಲ್ ಬಳಿಯ ತೈರೆ ಸಹಿತ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಮೇ 12ರಂದು ಸಂಜೆ 4ಕ್ಕೆ ಅವರು ಪೆರ್ಲ ಸಮೀಪದ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬೇಟಿ ನೀಡಲಿದ್ದಾರೆ.
ಡಿಜಿಪಿ ರಾವಡ ಆಜಾದ್ ಚಂದ್ರಶೇಖರ್ ಕಾಸರಗೋಡು ಪ್ರಯಾಣದ ನಡುವೆ ಕಣ್ಣೂರು ಜಿಲ್ಲೆಯ ತಳಿಪರಂಬ ಶ್ರೀ ರಾಜರಾಜೇಶ್ವರ ದೇವಸ್ಥಾನ, ಪರಶ್ಶಿನಿಕಡವು ಮುತ್ತಪ್ಪನ್ ಮಡಪ್ಪುರ, ಶ್ರೀ ಕೃಷ್ಣ ದೇವಸ್ಥಾನ ಮತ್ತು ಮಾಡಾಯಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕಾಸರಗೋಡಿಗೆ ಆಗಮಿಸಿದ ಡಿಜಿಪಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಶೃಂಗೇರಿ ಜಗದ್ಗುರುಗಳು ತಿರುವಿದಾಂಕೂರು ಸಾಮ್ರಾಜ್ಯದ ರಾಜಗುರುಗಳಾಗಿದ್ದರಿಂದ ಕೇರಳದ ಆಡಳಿತಕ್ಕೂ ಶೃಂಗೇರಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಶೃಂಗೇರಿ ಮಠದ ಸ್ವಾಮೀಜಿಗಳು ಕೇರಳಕ್ಕೆ ಭೇಟಿ ನೀಡಿದಾಗಲೆಲ್ಲ ಅವರನ್ನು ರಾಜ್ಯದ ಅತಿಥಿಯಾಗಿ ಪರಿಗಣಿಸಿ ಕೇರಳ ಪೊಲೀಸರು ಅವರಿಗೆ ಗಾರ್ಡ್ ಆಫ್ ಆನರ್ ನೀಡುತ್ತಾರೆ. ಶೃಂಗೇರಿ ಜಗದ್ಗುರುಗಳಿಗೆ ಮಾತ್ರ ಈ ಅಪರೂಪದ ಗೌರವ.

.jpeg)
0 Comments