ಹಾವೇರಿ : ಬೆಂಗಳೂರಿನಿಂದ ಗದಗ ನಗರಕ್ಕೆ ಹೋಗುತ್ತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ಬಳಿ ರಾಜ್ಯಹೆದ್ದಾರಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಪಲ್ಲಕ್ಕಿ ಬಸ್‌ನಲ್ಲಿ ಸುಮಾರು 17 ಹೆಚ್ಚು ಪ್ರಯಾಣಿಕರು ಗದಗ ಕಡೆಗೆ ಪ್ರಯಾಣಿಸುತ್ತಿದ್ದರು. ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಈ ಬಸ್ ಹಾವೇರಿ ಜಿಲ್ಲೆಯ ದೇವರಗುಡ್ಡದ ಬಳಿ ತಲುಪುತ್ತಿದ್ದಂತೆ ಅಚಾನಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಚಲಿಸುತ್ತಿದ್ದಂತೆಯೇ ಒಳಗಿನಿಂದ ದಟ್ಟವಾದ ಹೊಗೆ ಬರಲಾರಂಭಿಸಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಒಮ್ಮೆಲೇ ಆತಂಕಕ್ಕೊಳಗಾಗಿದ್ದಾರೆ. ಆದರೆ, ಪರಿಸ್ಥಿತಿಯನ್ನು ಅರಿತ ಬಸ್ ಚಾಲಕ ಗಾಬರಿಯಾಗದೆ ತಕ್ಷಣವೇ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಬಸ್ಸಿನಲ್ಲಿ ಸುಮಾರು 17 ಪ್ರಯಾಣಿಕರಿದ್ದರು. ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸುವ ಮೊದಲೇ ಚಾಲಕ ಎಲ್ಲ ಪ್ರಯಾಣಿಕರನ್ನು ಶಾಂತವಾಗಿ ಕೆಳಗಿಳಿಯಲು ಸೂಚಿಸಿದರು. ಚಾಲಕನ ಈ ಚುರುಕಾದ ನಿರ್ಧಾರದಿಂದಾಗಿ ಬಸ್ಸಿನಲ್ಲಿದ್ದ ಎಲ್ಲ 17 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆಯೇ ಬೆಂಕಿ ಬಸ್ಸಿನಾದ್ಯಂತ ಆವರಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ, ಅಷ್ಟರಲ್ಲೇ ಬೆಂಕಿಯ ಕನ್ನಾಲಿಗೆಗೆ ಬಸ್ ಸಂಪೂರ್ಣ ಆಹುತಿಯಾಗಿತ್ತು. ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಬೆಂಕಿ ಕಾಣಿಸಿಕೊಳ್ಳಲು ಎಂಜಿನ್‌ನಲ್ಲಾದ ತಾಂತ್ರಿಕ ದೋಷವೇ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

0 Comments