Ticker

6/recent/ticker-posts

Ad Code

ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಬಿಜೆಪಿ ಸೋಲಿಗೆ ಮತೀಯ ಮೂಲಭೂತವಾದಿ ಸಂಘಟನೆಗಳ ಸಂಘಟಿತ ಪ್ರಯತ್ನ ಮತ್ತು ಎಡರಂಗದ ಮತ ಸೋರಿಕೆ ಕಾರಣ : ಕೆ.ಸುರೇಂದ್ರನ್

 

ಕಾಸರಗೋಡು :  ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ  ಮತೀಯ ಮೂಲಭೂತವಾದಿ ಸಂಘಟನೆಗಳ ಸಂಘಟಿತ ಪ್ರಯತ್ನ ಮತ್ತು ಎಡರಂಗದ ಮತ ಸೋರಿಕೆಯಾಗಿ  ಯುಡಿಎಫ್ ಗೆ ಲಭಿಸಿರುವುದೇ ಬಿಜೆಪಿ ಸೋಲಿಗೆ ಕಾರಣ  ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಂಜೇಶ್ವರದ ಎನ್ ಡಿ ಎ ಅಭ್ಯರ್ಥಿ ಕೆ. ಸುರೇಂದ್ರನ್ ಅಭಿಪ್ರಾಯಪಟ್ಟರು. ಚುನಾವಣಾ ಪರಾಜಯದ ಬಳಿಕ ಕಾಸರಗೋಡು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಸರಗೋಡು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮತೀಯ, ಸಾಮುದಾಯಿಕ ಧ್ರುವೀಕರಣ ನಡೆದಿದೆ ಎಂದು ಆರೋಪಿಸಿದರು.

ಮಂಜೇಶ್ವರದಲ್ಲಿ ಈ ಬಾರಿ ಎಡರಂಗಕ್ಕೆ 20ಸಾವಿರಕ್ಕೂ ಅಧಿಕ ಮತ ಕುಸಿತವಾಗಿದೆ. ಇದೇ ಸಿಪಿಎಂ ತನ್ನ ಮತಗಳನ್ನು ಯುಡಿಎಫ್ ಗೆ ನೀಡಿರುವುದಕ್ಕೆ ದೃಷ್ಟಾಂತ ಎಂದವರು ಆರೋಪಿಸಿದರು. ಈ ಬಾರಿ ಕೋಮು ಚಿಂತನೆ ಹೊಂದಿರುವ ಎಲ್ಲಾ ಧಾರ್ಮಿಕ ಸಂಘಟನೆಗಳು ಆರಂಭದಿಂದಲೂ ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸಿವೆ. ಆದರೂ, ಕಾಸರಗೋಡು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ನೆಲೆ ಹೆಚ್ಚಿದೆ ಮತ್ತು ಬಿಜೆಪಿಯ ಮತಗಳಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ರಾಜ್ಯ ವಿಧಾನಸಭಾ ಚುನಾವಣೆಗಳನ್ನು ನಾವು ಪರಿಶೀಲಿಸಿದಾಗ, ಉತ್ತಮ ಪ್ರಗತಿ ಕಂಡುಬಂದಿದೆ. ಜನರು ನಿಜವಾದ ಮೂರನೇ ಪರ್ಯಾಯವನ್ನು ಬಯಸುತ್ತಾರೆ ಎಂಬುದಕ್ಕೆ ಎನ್‌ಡಿಎ 3 ಸ್ಥಾನಗಳಲ್ಲಿ ಜಯಗಳಿಸಿರುವುದು ದೊಡ್ಡ ಪುರಾವೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

Post a Comment

0 Comments