ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಬೇಕೆಂಬ ಶ್ಯಾಮ್ ಪ್ರಸಾದ್ ಮುಖರ್ಜಿ, ವಾಜಪೇಯಿ ಅವರ ಕನಸು ನನಸಾಗಿದೆ. ಬಿಜೆಪಿ ಆಡಳಿತದ ರಾಜ್ಯಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಗೋವಾ, ರಾಜಸ್ಥಾನ, ಹರ್ಯಾಣ, ದೆಹಲಿ, ಒಡಿಶಾ, ಉತ್ತರಾಖಂಡ್, ಛತ್ತೀಸ್‌ಗಡ, ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರ, ತ್ರಿಪುರ ಈ 16 ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರ ಆಡಳಿತವಿದೆ. ಬಿಹಾರ(ಜೆಡಿಯು) ಆಂಧ್ರ ಪ್ರದೇಶ (ಟಿಡಿಪಿ), ನಾಗಾಲ್ಯಾಂಡ್ (ನಾಗಾ ಪೀಪಲ್ಸ್ ಫ್ರಂಟ್) ಮೇಘಾಲಯ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ಎಂಬೀ 4 ರಾಜ್ಯಗಳಲ್ಲಿ ಬಿಜೆಪಿ ಎನ್‌ಡಿಎ ಮೈತ್ರಿ ಆಡಳಿತವಿದೆ.
ಹಿಮಾಚಲ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಜೊತೆ (ಜೆಎಎಂ ಸರ್ಕಾರ) ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಉಳಿದ 4 ರಾಜ್ಯಗಳಾದ ಜಮ್ಮು ಕಾಶ್ಮೀರ – ಎನ್‌ಸಿ ಒಮರ್ ಅಬ್ದುಲ್ಲಾ, ಪಂಜಾಬ್ – ಭಗವಂತ್ ಮಾನ್, ಸಿಕ್ಕಿಂ – ಎಸ್‌ಕೆಎಂ, ತಮಿಳುನಾಡು- ಟಿವಿಕೆ ಆಡಳಿತವಿದೆ.
1980ರಲ್ಲಿ ಜನತಾ ಪಕ್ಷದಿಂದ ಹೊರಬಂದು ಹೊಸದಾಗಿ ಬಿಜೆಪಿಯನ್ನು ಕಟ್ಟಿದಾಗ ಪಕ್ಷವು ಆರಂಭಿಕ ಹಂತದ ಸವಾಲುಗಳನ್ನು ಎದುರಿಸುತ್ತಿತ್ತು. ಆ ಸಮಯದಲ್ಲಿ ವಾಜಪೇಯಿ ಭಾಷಣದ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದರು. 1980ರಲ್ಲಿ ಮುಂಬೈನ ಬಾಂದ್ರಾದಲ್ಲಿ ನಡೆದ ಬಿಜೆಪಿಯ ಮೊದಲ ರಾಷ್ಟ್ರೀಯ ಅಧಿವೇಶನದಲ್ಲಿ ಅಂಧೇರಾ ಛಟೇಗಾ, ಸೂರಜ್ ನಿಕ್ಲೇಗಾ, ಕಮಲ್ ಖಿಲೇಗಾ(ಅಂಧಕಾರ ಅಳಿಯಲಿದೆ, ಸೂರ್ಯ ಉದಯಿಸಲಿದ್ದಾನೆ, ಕಮಲ ಅರಳಲಿದೆ) ಎಂಬ ಭವಿಷ್ಯವಾಣಿಯನ್ನು ಮಾಡಿದ್ದರು. ರಾಜಕೀಯವಾಗಿ ಎಷ್ಟೇ ಕತ್ತಲೆ ಆವರಿಸಿದ್ದರೂ, ಭವಿಷ್ಯದಲ್ಲಿ ಬಿಜೆಪಿ ಇಡೀ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಅಚಲ ವಿಶ್ವಾಸವನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ದೊಡ್ಡ ಮಟ್ಟದ ಯಶಸ್ಸು ಕಂಡಾಗಲೆಲ್ಲಾ ನರೇಂದ್ರ ಮೋದಿ ಅವರೂ ಸೇರಿದಂತೆ ಅನೇಕ ನಾಯಕರು ವಾಜಪೇಯಿ ಅವರ ಈ ಹುರಿದುಂಬಿಸುವ ಸಾಲುಗಳನ್ನು ಆಗಾಗ ನೆನಪಿಸಿಕೊಳ್ಳುವುದಿದೆ.

0 Comments