ಕುಂಬ್ಡಾಜೆ : ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ ಭವ್ಯ ಮಹೋತ್ಸವ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಧಾರ್ಮಿಕ ಸಭೆ ನಡೆಯಿತು. ಪಂದಳ ಅರಮನೆಯ ನಾರಾಯಣ ವರ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಉಬ್ರಂಗಳ ಕ್ಷೇತ್ರಕ್ಕೆ ಆಗಮಿಸಿದಾಗ ಶಬರಿಮಲೆಯ ಅಯ್ಯಪ್ಪನ ದೇವಾಲಯದಂತೆ ಭಾಸವಾಗುತ್ತಿದೆ. ಶಾಸ್ತಾರ ದೇವರ ಸಾನ್ನಿಧ್ಯದ ಫಲವಾಗಿ ನಾಡು ಸಮೃದ್ಧಿಯನ್ನು ಕಾಣಲಿ. ಬಡಗು ಶಬರಿಮಲೆಯು ಪರಮಪವಿತ್ರ ಧಾರ್ಮಿಕ ಕೇಂದ್ರವಾಗಿ ಮುಂದಿನ ದಿನಗಳಲ್ಲಿ ಜಗತ್ಪ್ರಸಿದ್ಧವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಈ ಸಂದರ್ಭದಲ್ಲಿ ಅವರನ್ನು ಕ್ಷೇತ್ರದ ವತಿಯಿಂದ ಅಭಿನಂದಿಸಲಾಯಿತು. ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
"ಸಮಾಜ ಅಭಿವೃದ್ಧಿಯಾಗಲು ಯುವಸಮುದಾಯವು ವಿಶೇಷ ಕಾಳಜಿಯನ್ನು ವಹಿಸಬೇಕು. ಕೇವಲ ಉದ್ಯೋಗಕ್ಕಾಗಿ ಮಾತ್ರ ಜೀವನವನ್ನು ಮಾಡುವುದಲ್ಲ. ನಮ್ಮ ಭವಿಷ್ಯದ ಕುರಿತಾದ ಕಲ್ಪನೆಯನ್ನು ಗಮನದಲ್ಲಿಟ್ಟು ಹಿಂದೂ ಸಮಾಜದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ಹೆಚ್ಚು ಹೆಚ್ಚು ಜನಿಸಿಬರಬೇಕು" ಎಂದು ಶ್ರೀ ಕ್ಷೇತ್ರದ ಗೌರವ ಸಲಹೆಗಾರ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಪ್ರಖ್ಯಾತ ದೈವಜ್ಞ ಕೆ.ಸಿ.ನಾಗೇಂದ್ರ ಭಾರದ್ವಾಜ್ ಸುರತ್ಕಲ್, ರಾಮಗುರು ಸ್ವಾಮಿ ಉದಯಗಿರಿ, ಹೆಸ್ಕಾಂ, ಧಾರವಾಡ ತಾಂತ್ರಿಕ ನಿರ್ದೇಶಕ ಜಗದೀಶ್ ಎಸ್, ಶ್ರೀ ಕ್ಷೇತ್ರದ ಆಡಳಿತ ಮೊತ್ತೇಸರ ಡಾ| ಕಿಶೋರ್ ಕುಮಾರ್ ಕುಣಿಕುಳ್ಳಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕುಣಿಕುಳ್ಳಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. 18 ಮೆಟ್ಟಿಲುಗಳಿಗೆ ಅಳವಡಿಸಿದ ಹಿತ್ತಾಳೆ ಕವಚದ ದಾನಿಗಳಾದ ತಾಳಿಪ್ಪಾಡಿ ಜಾಹ್ನವಿ ಶಾಸ್ತ್ರೀ, ಬೆಂಗಳೂರು ಅವರನ್ನು ಗೌರವಿಸಲಾಯಿತು. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಹಿತ್ತಾಳೆ ಕವಚದ 18 ಮೆಟ್ಟಲುಗಳ ದ್ವಾರಪೂಜೆ ನೆರವೇರಿಸಿದರು. 101 ಚೆಂಡೆಗಳ ಏಕಕಾಲದ ಧ್ವನಿಯು ಆಕಾಶವನ್ನೇ ಮುಟ್ಟುವಂತಿದ್ದು, ಭಕ್ತರಲ್ಲಿ ಅಧ್ಯಾತ್ಮದ ಸಂಚಲನ ಮೂಡಿಸಿತು. ವಾದ್ಯಗಳ ಬಡಿತಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಭಕ್ತರು, ಕ್ಷೇತ್ರದ ದಿವ್ಯ ಪರಿಸರಕ್ಕೆ ಹೊಸ ಕಳೆಯನ್ನು ತಂದಿದ್ದರು. ಮೇಳದ ಗಂಭೀರ ನಾದವು ಸುತ್ತಮುತ್ತಲಿನ ಪರಿಸರವನ್ನು ದೇವಲೋಕದಂತೆ ಪರಿವರ್ತಿಸಿದ್ದು, ಪ್ರತಿಯೊಬ್ಬರ ಮನಸ್ಸಿನಲ್ಲಿ ಭಕ್ತಿಭಾವ ಉಕ್ಕಿ ಹರಿಯುವಂತಾಯಿತು.
ಈ ಸಂದರ್ಭದಲ್ಲಿ ಸುರೇಶ್ ಉಳಿಯತ್ತಡ್ಕ ಗಂಗಾಧರನ್ ಮಾರಾರ್ ನೀಲೇಶ್ವರ ಮತ್ತು ಮಾಯಿಪ್ಪಾಡಿ ಅರಮನೆಯ ರಘುರಾಮ ವರ್ಮ ಅವರನ್ನು ಗೌರವಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷ ಹರಿನಾರಾಯಣ ಶಿರಂತಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿಯ ಕಾರ್ಯದರ್ಶಿ ಸತೀಶ್ ವೈ. ಸ್ವಾಗತಿಸಿ, ಕೋಶಾಧಿಕಾರಿ ರಾಜಶೇಖರ ಪದ್ಮಾರು ವಂದಿಸಿದರು. ಚಂದ್ರಶೇಖರ ಕುರುಪ್ಪ್ ನಿರೂಪಿಸಿದರು.

0 Comments