Ticker

6/recent/ticker-posts

Ad Code

ಮಾರ್ಚ್ ಕೊನೆಯವರೆಗೆ ಬದಿಯಡ್ಕ ‌ಪಂ.ನ ಯಾವುದೇ ಉದ್ಯೋಗಿಗೆ ವರ್ಗಾವಣೆ ನೀಡಬಾರದೆಂದು ಪಂ.ಅಧ್ಯಕ್ಷರ ಮನವಿ


 ಬದಿಯಡ್ಕ : ಆರ್ಥಿಕ ವರ್ಷ ಕೊನೆಗೊಳ್ಳುವ  ಮಾರ್ಚ್ ತಿಂಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರವು ಬದಿಯಡ್ಕ ಗ್ರಾಮ ಪಂಚಾಯತಿನ ಕತ್ತು ಹಿಸುಕಲು ಯತ್ನಿಸುತ್ತಿದೆಯೆಂದು ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ ಡಿ.ದೂರಿದ್ದಾರೆ.‌ ಅವರು ರಾಜ್ಯ ಸ್ಥಳೀಯಾಡಳಿತ ಸಚಿವರಿಗೆ‌ ಪತ್ರ ಬರೆದು ಮಾರ್ಚ್ ತಿಂಗಳು ಕೊನೆಗೊಳ್ಳುವ‌ ಮೊದಲು ಬದಿಯಡ್ಕ ಗ್ರಾಮ‌ ಪಂಚಾಯತು ಕಚೇರಿಯಿಂದ ಯಾವುದೇ ಅಧಿಕಾರಿಯನ್ನು ವರ್ಗಾಯಿಸಬಾರದು ಎಂದು ಒತ್ತಾಯಿಸಿದ್ದಾರೆ.

ನೂತನ  ಬದಿಯಡ್ಕ ಗ್ರಾಮ ಪಂಚಾಯತು ಆಡಳಿತ ವಹಿಸಿದ ವೇಳೆ ಗ್ರಾಮ ಪಂಚಾಯತು ಕಚೇರಿಯಲ್ಲಿ 10 ರಷ್ಟು ಉದ್ಯೋಗಿಗಳು ಇರಲಿಲ್ಲ. ಗ್ರಾಮ ಪಂಚಾಯತು ಆಡಳಿತದ ಹಾಗೂ ಇತರರ ನಿರಂತರ ಒತ್ತಾಯದ ಮೇರೆಗೆ ಕಾರ್ಯದರ್ಶಿ ಸಹಿತ ಇತರ ಉದ್ಯೋಗಿಗಳ ನೇಮಕಾತಿ ನಡೆದಿತ್ತು. ಆದರೆ ಇದೀಗ ಕಾರ್ಯದರ್ಶಿಯವರು ರಾಜಕೀಯ ಒತ್ತಡದಿಂದ ಸ್ವತಃ ವರ್ಗಾವಣೆ ಪಡೆದಿದ್ದಾರೆ. ಇತರ ಉದ್ಯೋಗಿಗಳು ಸಹ ಇದೇ ಹಾದಿಯಲ್ಲಿದ್ದಾರೆ.

 ಸ್ಥಳೀಯಾಡಳಿತೆಗಳ ಆರ್ಥಿಕ ವರ್ಷ ಮಾರ್ಚ್ ತಿಂಗಳಲ್ಲಿ‌ ಕೊನೆಗೊಳ್ಳಲಿದೆ. ವಾರ್ಷಿಕ ಬಜೆಟ್, ಯೋಜನೆ ರೂಪೀಕರಣ, ಕಳೆದ ವರ್ಷದ ಯೋಜನೆಯ ಪೂರ್ತೀಕರಣ ಎಂಬಿವು ಮಾರ್ಚ್ ತಿಂಗಳಲ್ಲಿ ‌ಮುಗಿಸಬೇಕಿದೆ. ಆದರೆ ಉದ್ಯೋಗಿಗಳ ಕೊರತೆಯು ಈ ಎಲ್ಲಾ ಕೆಲಸ ಕಾರ್ಯಗಳ ವೇಗಕ್ಕೆ ಕಡಿವಾಣ ಹಾಕಲಿದೆ ಮಾತ್ರವಲ್ಲ ಅಭಿವೃದ್ದಿಯಲ್ಲಿ ಬದಿಯಡ್ಕ ಪಂಚಾಯತು ಹಿಂದುಳಿಯಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ಕೊನೆಯವರೆಗೆ ಬದಿಯಡ್ಕ ‌ಪಂಚಾಯತಿನ ಯಾವುದೇ ಉದ್ಯೋಗಿಗೆ ವರ್ಗಾವಣೆ ನೀಡಬಾರದು ಎಂದವರು ಸ್ಥಳೀಯಾಡಳಿತೆ ಸಚಿವರಲ್ಲಿ‌ ವಿನಂತಿಸಿದ್ದಾರೆ

Post a Comment

0 Comments