ವಿಜ್ಞಾನವು ಕೇವಲ ಪ್ರಯೋಗಾಲಯದ ಉಪಕರಣವಲ್ಲ, ಅದು ನಮ್ಮ ಆಲೋಚನಾ ಕ್ರಮ. ಮಾನವನ ಕುತೂಹಲಕ್ಕೆ ಉತ್ತರ ಹುಡುಕುವ ಹಾದಿಯೇ ವಿಜ್ಞಾನ. ಇದು ಕೇವಲ ಓದಿ ನೆನಪಿಟ್ಟುಕೊಳ್ಳುವ ವಿಷಯವಲ್ಲ, ಅನುಭವಿಸಿ ಅಳವಡಿಸಿಕೊಳ್ಳಬೇಕಾದ ಜೀವನ ಕ್ರಮ. ನಾವು ಬೆಳೆಸಿಕೊಳ್ಳುವ ಪ್ರತಿಯೊಂದು ಸಣ್ಣ ಕುತೂಹಲವೂ ನಾಳೆಯ ದೊಡ್ಡ ಸಂಶೋಧನೆಗೆ ಅಡಿಪಾಯವಾಗಬಲ್ಲದು.
ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 28 ರಂದು 'ರಾಷ್ಟ್ರೀಯ ವಿಜ್ಞಾನ ದಿನ'ವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಜ್ಞಾನದ ಮಹತ್ವವನ್ನು ಸಾರಲು ಮತ್ತು ಭಾರತದ ಶ್ರೇಷ್ಠ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಸಾಧನೆಯನ್ನು ಸ್ಮರಿಸಲು ಈ ದಿನವನ್ನು ಮೀಸಲಿಡಲಾಗಿದೆ.
1928 ರ ಫೆಬ್ರವರಿ 28 ರಂದು ಸರ್ ಸಿ.ವಿ. ರಾಮನ್ ಅವರು ಜಗತ್ಪ್ರಸಿದ್ಧ 'ರಾಮನ್ ಎಫೆಕ್ಟ್' (Raman Effect) ಸಂಶೋಧನೆಯನ್ನು ಜಗತ್ತಿಗೆ ಪರಿಚಯಿಸಿದರು. ಈ ಅದ್ಭುತ ಸಂಶೋಧನೆಗಾಗಿ ಅವರಿಗೆ 1930 ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪ್ರತಿಷ್ಠಿತ 'ನೋಬೆಲ್ ಪ್ರಶಸ್ತಿ' ಲಭಿಸಿತು. ಈ ಗೌರವ ಪಡೆದ ಮೊದಲ ಏಷ್ಯನ್ ವಿಜ್ಞಾನಿ ಎಂಬ ಹೆಗ್ಗಳಿಕೆ ಅವರದಾಯಿತು. ಅವರ ಈ ಸಾಧನೆಯ ನೆನಪಿಗಾಗಿ 1987 ರಿಂದ ಈ ದಿನವನ್ನು 'ರಾಷ್ಟ್ರೀಯ ವಿಜ್ಞಾನ ದಿನ'ವಾಗಿ ಆಚರಿಸಲಾಗುತ್ತಿದೆ.
1921ರಲ್ಲಿ ಸರ್ ಸಿ.ವಿ. ರಾಮನ್ ಅವರು ಹಡಗಿನಲ್ಲಿ ಲಂಡನ್‌ನಿಂದ ಭಾರತಕ್ಕೆ ಮರಳುತ್ತಿದ್ದರು. ಆಗ ಮೆಡಿಟರೇನಿಯನ್ ಸಮುದ್ರದ ಗಾಢ ನೀಲಿ ಬಣ್ಣ ಅವರ ಕುತೂಹಲವನ್ನು ಕೆರಳಿಸಿತು. "ಸಮುದ್ರದ ನೀರು ಏಕೆ ನೀಲಿಯಾಗಿ ಕಾಣುತ್ತದೆ?" "ಆಕಾಶದ ಪ್ರತಿಬಿಂಬದಿಂದ ಸಮುದ್ರ ನೀಲಿಯಾಗಿ ಕಾಣುತ್ತದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ?" ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಮೂಡಿತು. ಈ ಕುತೂಹಲವೇ ಅವರ ಸಂಶೋಧನೆಗೆ ನಾಂದಿಯಾಯಿತು. ಸತತ ಏಳು ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟ ಅವರು, ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿ, 1928ರ ಫೆಬ್ರವರಿ 28ರಂದು ಬೆಳಕಿನ ಚದುರುವಿಕೆಯ ಸಿದ್ಧಾಂತವನ್ನು ಜಗತ್ತಿಗೆ ಸಾರಿದರು. ಇದನ್ನೇ ಇಂದು ನಾವು 'ರಾಮನ್ ಎಫೆಕ್ಟ್' ಎಂದು ಕರೆಯುತ್ತೇವೆ.
ಜನಸಾಮಾನ್ಯರ ದೈನಂದಿನ ಜೀವನದಲ್ಲಿ ವಿಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುವುದು, ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು, ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಕುತೂಹಲವನ್ನು ಬೆಳೆಸುವುದು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.
ವಿಜ್ಞಾನವು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ದೇಶದ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ಸರ್ ಸಿ.ವಿ. ರಾಮನ್ ಅಂತಹ ಮಹಾನ್ ವ್ಯಕ್ತಿಗಳ ಸಾಧನೆಯಿಂದ ಸ್ಪೂರ್ತಿ ಪಡೆದು, ನಾವು ಕೂಡ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳೋಣ.
ವನಜಾಕ್ಷಿ ಪಿ ಚೆಂಬ್ರಕಾನ

0 Comments