ಕಾಸರಗೋಡು : ಅಚ್ಚಗನ್ನಡ ನಾಡಾದ ಕಾಸರಗೋಡಿನ ವೈಶಿಷ್ಟ ಪೂರ್ಣ ಸಂಸ್ಕೃತಿ ಶಾಲಾ ಪಾಠ ಪುಸ್ತಕಗಳಲ್ಲಿ ಕೂಡ ನೋಡಲಾಗದ ದುಸ್ಥಿತಿ ಸನ್ನಿಹಿತವಾಗಿದೆ. ಭೌಗೋಳಿಕವಾಗಿ ಕನ್ನಡತನವನ್ನು ಕಳೆದುಕೊಂಡ ನಾವು ಸಾಂಸ್ಕೃತಿಕ, ಶೈಕ್ಷಣಿಕವಾಗಿಯೂ ನಮ್ಮನ್ನು ಕಳೆದುಕೊಳ್ಳುತ್ತಿದ್ದೇವೆ. ಇನ್ನು ಕೂಡ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಅಸ್ಮಿತೆಗೆ ದಾಖಲೆ ಇಲ್ಲದಂತಾಗುವುದು ಎಂದು ಕನ್ನಡ ಹೋರಾಟಗಾರ, ಮುಂದಾಳು ಸತ್ಯನಾರಾಯಣ ತಂತ್ರಿಗಳು ಅಭಿಪ್ರಾಯಪಟ್ಟರು. ಅವರು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಡೆಯುತ್ತಿರುವ ತಿಂಗಳ ಕಾರ್ಯಕ್ರಮ 'ಕಾಸರಗೋಡು ಕನ್ನಡ ಹಬ್ಬ' ಅಭಿಯಾನದ 'ಕಾಸರಗೋಡು ಜಾನಪದ ಸಂಭ್ರಮ' ಎಂಬ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ರಾಮಪ್ಪ ಮಂಜೇಶ್ವರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಔದ್ಯೋಗಿಕವಾಗಿ ಕನ್ನಡಕ್ಕೆ ಆಡಳಿತಾತ್ಮಕ ಪೆಟ್ಟು ಬೀಳುತ್ತಿದ್ದು ಅದನ್ನು ಎದುರಿಸಿ ಹೋರಾಡಲು ಕನ್ನಡಿಗರೆಲ್ಲರ ಬೆಂಬಲ ಅತ್ಯಗತ್ಯ. ಇಂತಹ ಕಾರ್ಯಕ್ರಮಗಳು ಅಲ್ಲಲ್ಲಿ ಆಗಾಗ ನಡೆದರೆ ಎಚ್ಚರಿಸುವ ಕೆಲಸವಾದಿತು ಎಂದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಕಾಸರಗೋಡಿನಲ್ಲಿ ಕನ್ನಡ ಕಟ್ಟುವ ಕಾಯಕಕ್ಕೆ ಯುವ ಜನತೆ ಧ್ವನಿಯಾಗಬೇಕಿದೆ ಎಂದರು. ನೃತ್ಯ ವಿದುಷಿ ಸೌಮ್ಯಾ ಶ್ರೀಕಾಂತ್ ಮಧೂರು, ಯುವ ಸಂಘಟಕ, ಗಾಯಕ ಸಿದ್ದೇಶ್ ಕೋಲಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಹಿರಿಯ ಪತ್ರಕರ್ತ, ಕವಿ ರಾಧಾಕೃಷ್ಣ ಉಳಿಯತ್ತಡ್ಕ ಉಪಸ್ಥಿತರಿದ್ದರು. ದಿವಾಕರ ಕಾಸರಗೋಡು ಪ್ರಾರ್ಥನೆ ಹಾಡಿದರು. ಸಾಂಸ್ಕೃತಿಕ ಭವನದ ಸಂಚಾಲಕ ಗುರುಪ್ರಸಾದ್ ಕೋಟೆಕ್ಕಣಿ ಸ್ವಾಗತಿಸಿ ಕಾವ್ಯ ಕುಶಲ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.

.jpeg)
.jpeg)
0 Comments