Ticker

6/recent/ticker-posts

Ad Code

ಕಾಸರಗೋಡು ಜಿಲ್ಲೆಯಾದ್ಯಂತ ಸಂಭ್ರಮದ ಈದುಲ್ ಫಿತರ್ ಆಚರಣೆ

 

ಕಾಸರಗೋಡು: ಪವಿತ್ರ ರಮ್ಜಾನ್‌ ವೃತಗಳನ್ನು ಅನುಷ್ಠಾನಗೊಳಿಸಿದ ಕಾಸರಗೋಡು ಜಿಲ್ಲೆಯ ಮುಸ್ಲಿಮ್ ಬಾಂಧವರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ 'ಈದುಲ್‌ ಫಿತ್ರ್' ಆಚರಿಸಿದರು. ಜಿಲ್ಲೆಯಾದ್ಯಂತ ಎಲ್ಲಾ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಯಾ ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಹಬ್ಬಕ್ಕೆ ಸಂಭ್ರಮದ ಕಳೆ ತಂದರು. ಶುಕ್ರವಾರ ಮುಂಜಾನೆಯೇ ಹೊಸ ವಸ್ತ್ರ ಧರಿಸಿದ ಮುಸ್ಲಿಂ ಬಾಂಧವರು  ಪ್ರಸಿದ್ಧ ಮಸೀದಿಗಳಾದ, ತಳಂಗರೆ ಮಾಲೀಕ್ ದಿನಾರ್,  ಉದ್ಯಾವರ ಜುಮಾ ಮಸೀದಿ, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಮಸ್ಟಿದುನ್ನೂರು, ಪೊಸೋಟು ಜುಮಾ ಮಸೀದಿ, ಹೊಸಬೆಟ್ಟು, ಹೊಸಂಗಡಿ ಸೇರಿದಂತೆ ವಿವಿಧ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ, ವಿಶ್ವ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಪ್ರಾರ್ಥನೆಯ ನಂತರ ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಜಾತಿ-ಧರ್ಮದ ಭೇದವಿಲ್ಲದೆ ಗೆಳೆಯರು, ಹಿತೈಷಿಗಳು ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಶುಭ ಹಾರೈಸಿದರು. ಹಬ್ಬದ ಅಂಗವಾಗಿ ಬಡವರಿಗೆ 'ಫಿತರ್ ಝಕಾತ್' ಹೆಸರಿನಲ್ಲಿ ದಾನವನ್ನು ವಿತರಿಸಲಾಯಿತು. ಮನೆ ಮನೆಗಳಲ್ಲಿ ವಿಶೇಷವಾಗಿ ತಯಾರಿಸಿದ ಶ್ಯಾವಿಗೆ ಪಾಯಸ ಹಾಗೂ ಬಿರಿಯಾನಿಯ ಘಮಲು ಹಬ್ಬದ ಮೆರುಗನ್ನು ಹೆಚ್ಚಿಸಿತ್ತು. ಹೊಸ ಬಟ್ಟೆ ಧರಿಸಿ, ಹಿರಿಯರಿಂದ 'ಈದಿ' (ಹಣ) ಪಡೆದ ಮಕ್ಕಳ ಸಂಭ್ರಮ ಮುಗಿಲುಮುಟ್ಟಿತ್ತು.

Post a Comment

0 Comments