ರಾಯಚೂರು: ಯುಗಾದಿ ಹಬ್ಬಾಚರಣೆಯ ಅಂಗವಾಗಿ ಬಣ್ಣದಾಟದ ನಂತರ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಅರಕೇರಾ ತಾಲೂಕಿನ ನಾಗೋಲಿ ಗ್ರಾಮದ ಬಳಿ ನಾರಾಯಣಪೂರ ಬಲದಂಡೆ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಬುದ್ದಿನ್ನಿ ಗ್ರಾಮದ ನಿವಾಸಿ ಗಂಗಾಧರ(20) ಮೃತ ದುರ್ದೈವಿ. ಹೋಳಿ ಬಳಿಕ ಸ್ನೇಹಿತರೊಂದಿಗೆ ಸ್ನಾನ ಮಾಡಲು ಕಾಲುವೆಗೆ ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದು, ಮಾಹಿತಿ ತಿಳಿದು ಗ್ರಾಮಸ್ಥರು ನಿರಂತರ ಶೋಧ ಕಾರ್ಯ ನಡೆಸಿದ್ದರು. ನಾಗೋಲಿ ಗ್ರಾಮದ ಬಳಿ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಾನ್ವಿ ತಾಲೂಕಿನ ಗೋವಿನದೊಡ್ಡಿ ಗ್ರಾಮದಲ್ಲಿ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ನೀರುಪಾಲಾಗಿದ್ದಾನೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೋಳಿ ಆಟವಾಡಿದ್ದ ಯುವಕರು ಕೆರೆ ಸ್ನಾನಕ್ಕೆ ತೆರಳಿದ್ದಾಗ ಗೋವಿಂದರಾಜು(30) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಗ್ರಾಮಸ್ಥರ ಸಹಕಾರದಿಂದ ಯುವಕನ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.jpeg)
0 Comments