ಪಡುಕುತ್ಯಾರು, ಮೇ 6 : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 16ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವು ಇದೇ ಬರುವ 2026ರ ಮೇ 12ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯಲಿದೆ.
ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾ ಯಾಗ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಆನೆಗುಂದಿಶ್ರೀ ಪ್ರಶಸ್ತಿ ವಿತರಣೆ ಹಾಗೂ ಯುವ ಶಿಲ್ಪಿಗಳಿಗೆ ಅಭಿನಂದನಾ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಬೆಳಿಗ್ಗೆ ಕಟಪಾಡಿಯ ಶ್ರೀ ಮಹಾಸಂಸ್ಥಾನದಲ್ಲಿ ಜಗದ್ಗುರುಗಳವರಿಂದ ಪಟ್ಟಾಭಿಷೇಕ ವರ್ಧಂತಿಗೆ ಸಂಬಂಧಿಸಿದ ವೈದಿಕ ವಿಧಿವಿಧಾನಗಳು ನೆರವೇರಲಿವೆ. ಶ್ರೀಕರಾರ್ಚಿತ ದೇವತಾ ಪೂಜೆಯ ಬಳಿಕ, ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಪೂಜೆ ನಡೆಯಲಿದೆ. ನಂತರ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ ಹಾಗೂ ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಲಿದೆ.
ಆನೆಗುಂದಿ ಪ್ರತಿಷ್ಠಾನದ ವತಿಯಿಂದ ಜಗದ್ಗುರುಗಳವರ ಪಾದಪೂಜೆ ಬಳಿಕ, ಮಹಾಸಂಸ್ಥಾನದ ಪ್ರಥಮ ವಿಶ್ವಸ್ಥರಾಗಿರುವ ದೇವಸ್ಥಾನಗಳ ಧರ್ಮದರ್ಶಿಗಳಿಂದ ಆಯಾ ದೇವಸ್ಥಾನಗಳ ವಾರ್ಷಿಕ ಗುರುಕಾಣಿಕೆ ಸಮರ್ಪಣೆ ಮತ್ತು ಫಲ ನ್ಯಾಸ ಕಾರ್ಯಕ್ರಮಗಳು ವಾಡಿಕೆಯಂತೆ ನಡೆಯಲಿವೆ.
ಇದೇ ಸಂದರ್ಭದಲ್ಲಿ ಜಗದ್ಗುರುಗಳವರ 50ನೇ ಜನ್ಮವರ್ಧಂತಿ ವರ್ಷಾಚರಣೆಯ ಅಂಗವಾಗಿ ಒಂದು ವರ್ಷದ ಕಾಲ ನಡೆಯಲಿರುವ ವಿವಿಧ ಮಹತ್ವದ ಕಾರ್ಯಕ್ರಮಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು. ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕೃತಿಕ ಪಂಚಪ್ರಬೋಧನ ಸಂಕಲ್ಪದ ‘ಸುವರ್ಣ ಸಂಕಲ್ಪ ಅಭಿಯಾನ’ ಪ್ರಾರಂಭೋತ್ಸವವೂ ನಡೆಯಲಿದೆ.
ಪಡುಕುತ್ಯಾರು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸರಸ್ವತೀ ಹೌಸಿಂಗ್ ಸೊಸೈಟಿ ಯೋಜನೆಯ ಲೋಕಾರ್ಪಣೆ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಇದೇ ಸಂದರ್ಭದಲ್ಲಿ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಪಿ. ಸುಜ್ಞಾನ ಮೂರ್ತಿ, ಸುರೇಶ್ ಶೆಟ್ಟಿ ಗುರ್ಮೆ (ಶಾಸಕರು), ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು ಕರ್ನಾಟಕ ಸರಕಾರ,ಡಾ. ನಿಲೇಶ್ ವಿಶ್ವಕರ್ಮ, ಪ್ರೊ. ಪ್ರಿಯಾಂಕ ನಿಲೇಶ್ ವಿಶ್ವಕರ್ಮ ಭಾಗವಹಿಸಲಿದ್ದಾರೆ.

0 Comments