ಪೈವಳಿಕೆ: 2025-26 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪೈವಳಿಕೆ ಕಾಯರ್ ಕಟ್ಟೆ ಸರಕಾರಿ ಕ ಪ್ರೌಢಶಾಲೆಯು 100% ಅತ್ಯುತ್ತಮ ಫಲಿತಾಂಶ ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 31 ವಿದ್ಯಾರ್ಥಿಗಳೂ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಜಯಶ್ರೀ ಎಲ್ಲಾ ವಿಷಯಗಳಲ್ಲಿಯೂ 'ಎ ಪ್ಲಸ್' (A+) ಗ್ರೇಡ್ ಪಡೆಯುವ ಮೂಲಕ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಇದರೊಂದಿಗೆ ಇಬ್ಬರು ವಿದ್ಯಾರ್ಥಿಗಳು 9 ವಿಷಯಗಳಲ್ಲಿ 'ಎ ಪ್ಲಸ್' ಹಾಗೂ ಮತ್ತಿಬ್ಬರು ವಿದ್ಯಾರ್ಥಿಗಳು 8 ವಿಷಯಗಳಲ್ಲಿ 'ಎ ಪ್ಲಸ್' ಅತ್ಯುನ್ನತ ಗ್ರೇಡ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಕೇವಲ ಶಿಕ್ಷಣದಲ್ಲಿ ಮಾತ್ರವಲ್ಲದೆ, ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಈ ಶಾಲೆ ನಿರಂತರವಾಗಿ ಮುಂಚೂಣಿಯಲ್ಲಿದ್ದು, ಈ ಬಾರಿಯ ನೂರಕ್ಕೆ ನೂರು ಫಲಿತಾಂಶವು ಶಾಲೆಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ.
ಅದ್ಭುತ ಸಾಧನೆಗೈದು ಶಾಲೆಯ ಹೆಸರನ್ನು ಎತ್ತಿಹಿಡಿದ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಅದಕ್ಕಾಗಿ ನಿರಂತರವಾಗಿ ಶ್ರಮಿಸಿದ ಅಧ್ಯಾಪಕ ವೃಂದವನ್ನು ಶಾಲಾ ಪ್ರಾಂಶಪಾಲರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ರಕ್ಷಕ ಸಂಘ (PTA), ಶಾಲಾ ನಿರ್ವಹಣಾ ಸಮಿತಿ (SMC) ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ. ಗ್ರಾಮೀಣ ಭಾಗದ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಸಾಧನೆಗೆ ಅನನ್ಯವಾಗಿದೆ.


0 Comments