ಬದಿಯಡ್ಕ : ಕುಂಬಳೆ ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಬದಿಯಡ್ಕ- ನೀರ್ಚಾಲು ಸಮೀಪದ ಪಡಿಪ್ಪರೆ ಎಂಬಲ್ಲಿ ರಸ್ತೆಗೆ ವಾಲಿಕೊಂಡಿರುವ ತೆಂಗಿನಮರವೊಂದು ಅಪಾಯಕಾರಿಯಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲಾಯಿತು.
ಬದಿಯಡ್ಕ ಗ್ರಾಮಪಂಚಾಯಿತಿ ನೀರ್ಚಾಲು ವಾರ್ಡು ವ್ಯಾಪ್ತಿಯ ಕನ್ನೆಪ್ಪಾಡಿ ಪಡಿಪ್ಪರೆ ಎಂಬಲ್ಲಿ ರಸ್ತೆಯ ಬದಿಯಲ್ಲೇ ಇರುವ ತೆಂಗಿನ ಮರವೊಂದು ರಸ್ತೆಗೆ ವಾಲಿಕೊಂಡಿತ್ತು. ತಿರುವಿನ ಸ್ಥಳವಾಗಿರುವುದರಿಂದ ಘನ ವಾಹನಗಳು ಸಂಚರಿಸುವ ವೇಳೆ ಈ ವಾಲಿಕೊಂಡಿರುವ ತೆಂಗಿನ ಮರವು ಅನೇಕ ವಾಹನಗಳಿಗೆ ತಾಗಿಕೊಳ್ಳುತ್ತಿತ್ತು. ಅದನ್ನು ತಪ್ಪಿಸುವುದಕ್ಕಾಗಿ ವಾಹನ ಚಾಲಕರು ಸ್ವಲ್ಪ ಬಲಭಾಗಕ್ಕೆ ಸಂಚರಿಸುತ್ತಿದ್ದರು. ಅದರಿಂದಾಗಿ ಎದುರಿನಿಂದ ಬರುವ ವಾಹನಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಅವರು ಅದನ್ನು ತೆರವುಗೊಳಿಸುವ ನಿರ್ಧಾರ ಕೈಗೊಂಡರು. ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರೊಂದಿಗೆ ಮಾತುಕತೆ ನಡೆಸಿ ಮುಂದಿನ ಕಾರ್ಯ ಕೈಗೊಳ್ಳಲಾಯಿತು. ವಿದ್ಯುತ್ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಅವರ ಸಹಯೋಗದೊಂದಿಗೆ ಕಾರ್ಮಿಕರು ಮರದ ತೆರವು ಕಾರ್ಯವನ್ನು ಪೂರ್ತಿಗೊಳಿಸಿದರು. ಭಾನುವಾರ ಬೆಳಗ್ಗೆ ಈ ಕಾರ್ಯ ನಡೆಸಲಾಯಿತು. ಮರವನ್ನು ತೆರವುಗೊಳಿಸಿರುವುದಕ್ಕೆ ವಾಹನ ಚಾಲಕರು ಹರ್ಷವ್ಯಕ್ತಪಡಿಸಿದ್ದಾರೆ.

0 Comments