Ticker

6/recent/ticker-posts

Ad Code

ಒಡಿಶಾದ ಕಟಕ್‌ನ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ; 10 ರೋಗಿಗಳು ಸಾವು

ಭುವನೇಶ್ವರ : ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐಸಿಯುನಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು 10 ರೋಗಿಗಳು ಸಾವನ್ನಪ್ಪಿದ್ದಾರೆ. ರೋಗಿಗಳನ್ನು ರಕ್ಷಿಸುವ ಸಂದರ್ಭದಲ್ಲಿ 11ರಷ್ಟು ಆಸ್ಪತ್ರೆ ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ. ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಧ್ಯರಾತ್ರಿ 2:30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಹಲವಾರು ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎಸ್‌ಸಿಬಿ ಆಸ್ಪತ್ರೆ ಒಡಿಶಾದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಮುಖ ವೈದ್ಯಕೀಯ ಕೇಂದ್ರವಾಗಿದೆ. ಒಡಿಶಾ ಮುಖ್ಯಮಂತ್ರಿಗಳು ಆರೋಗ್ಯ ಸಚಿವ ಮುಖೇಶ್ ಮಹಾಲಿಂಗ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ರೋಗಿಗಳನ್ನು ಸಹ ಭೇಟಿ ಮಾಡಿದ್ದಾರೆ.

ಒಟ್ಟು 23 ರೋಗಿಗಳನ್ನು ಇತರ ವಿಭಾಗಗಳಿಗೆ ಸ್ಥಳಾಂತರಿಸಲಾಗಿದೆ. ಐಸಿಯುಗಳು ಮತ್ತು ವಾರ್ಡ್‌ಗಳಿಗೆ ಸ್ಥಳಾಂತರಿಸುವಾಗ ಗಂಭೀರ ಸ್ಥಿತಿಯಲ್ಲಿದ್ದ ಏಳು ರೋಗಿಗಳು ಸಾವನ್ನಪ್ಪಿದರು. ಬಳಿಕ ಇನ್ನೂ ಮೂವರು ರೋಗಿಗಳು ಸಾವನ್ನಪ್ಪಿದರು. ಗಾಯಗೊಂಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಮಾಝಿ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

Post a Comment

0 Comments