Ticker

6/recent/ticker-posts

Ad Code

ಇರಾನ್ – ಇಸ್ರೇಲ್ ಯುದ್ಧ ; ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳು ರದ್ದು : ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರು

 

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ  ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ  ವಾಯುನೆಲೆ ಮುಚ್ಚಿರುವ ಕಾರಣ ಇಂದು ಸಹ ವಿಮಾನಗಳ ಹಾರಾಟ ರದ್ದುಗೊಂಡಿದೆ. ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹೊರಡಬೇಕಿದ್ದ 10 ವಿಮಾನಗಳು  ರದ್ದುಗೊಂಡಿವೆ. ಅದೇ ರೀತಿಯಲ್ಲಿ  ವಿದೇಶದಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ 12 ವಿಮಾನಗಳು ಕ್ಯಾನ್ಸಲ್ ಆಗಿವೆ. ಇಂದು ಒಟ್ಟು 22 ವಿಮಾನಗಳ ಹಾರಾಟ ರದ್ದುಗೊಂಡಿದೆ. ಅಬುಧಾಬಿ, ಜಿದ್ದಾ, ದೋಹಾ, ದುಬೈ, ಬಹ್ರೇನ್‌ನ ವಿಮಾನಗಳು ರದ್ದುಗೊಂಡಿದೆ.  ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ, ಖತಾರ್ ಸೇರಿದಂತೆ ಹಲವು ಏರ್‌ಲೈನ್ಸ್‌ಗಳು ವಿಮಾನ ಹಾರಾಟ ರದ್ದುಗೊಳಿಸಿದೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಟಿಕೆಟ್ ರಿ ಶೆಡ್ಯೂಲ್ ಅಥವಾ ಹಣ ಹಿಂತಿರುಗಿಸಲು  ವ್ಯವಸ್ಥೆ ಮಾಡಲಾಗಿದೆ. ಯುದ್ಧ ಆರಂಭದಿಂದಲೂ ಏರ್‌ಲೈನ್ಸ್ ಸಿಬ್ಬಂದಿ ಟಿಕೆಟ್ ಬುಕ್ ಮಾಡಿದವರಿಗೆ ಮಾಹಿತಿ ನೀಡುತ್ತಿದ್ದಾರೆ. ಫ್ಲೈಟ್ ಕನ್ಫರ್ಮ್ ಆಗದೇ ಏರ್‌ಪೋರ್ಟ್‌ಗೆ ಬಾರದಂತೆ ಏರ್‌ಪೋರ್ಟ್ ಆಡಳಿತ ಮಂಡಳಿ ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣ ಹಾಗೂ ಏರ್‌ಪೋರ್ಟ್‌ನಲ್ಲಿ ಹೆಲ್ಪ್ ಡೆಸ್ಕ್ ಮೂಲಕ ಮನವಿ ಮಾಡಿದೆ.

ಇಸ್ರೇಲ್‌-ಇರಾನ್‌ ಯುದ್ಧ ಭೀತಿ ಹೆಚ್ಚಿದ್ದು,  ಕೊಲ್ಲಿ ರಾಷ್ಟ್ರದಲ್ಲಿ ಸಿಲುಕಿ ಕನ್ನಡಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುಬೈನಲ್ಲಿ ಕರ್ನಾಟಕ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಪುತ್ರಿ ಮಮತಾ ರಾಯರೆಡ್ಡಿ ಸಿಲುಕಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ  ಸ್ನೇಹಿತೆಯ ಮದುವೆಗೆಂದು ದುಬೈಗೆ ಹೋಗಿದ್ದು,  ಹಿಂದಕ್ಕೆ ಬರಲು ವಿಮಾನ ಸಿಕ್ಕಿಲ್ಲ. ಈಗ ಸ್ನೇಹಿತರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ವಿಮಾನಯಾನ ಆರಂಭವಾದಾಗ ಕರೆದುಕೊಂಡು ಬರಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾಹಿತಿ ನೀಡಿದ್ದಾರೆ.

ಇರಾನ್-ಇಸ್ರೇಲ್ ಯುದ್ಧದ  ಪರಿಣಾಮ ಮಗಳ ಹುಟ್ಟುಹಬ್ಬ ಆಚರಣೆಗೆಂದು ದುಬೈ  ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಿರಣ್ ಮತ್ತು ಸುನೀತ ದಂಪತಿ ಮಗಳ ಹುಟ್ಟುಹಬ್ಬವನ್ನು  ಅವಿಸ್ಮರಣೀಯವಾಗಿ ಆಚರಿಸಲು ಫೆ.23ರಂದು ಬೆಂಗಳೂರಿನಿಂದ ದುಬೈ ಪ್ರವಾಸ ಕೈಗೊಂಡಿದ್ದರು. ಬುರ್ಜ್ ಖಲೀಫಾ ಮುಂದೆ ಮಗಳ ಬರ್ತ್‌ಡೇಯನ್ನ ದಂಪತಿ ಆಚರಿಸಿದ್ದು, ಶನಿವಾರ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಆಗಿತ್ತು. ಶನಿವಾರ ಮಧ್ಯಾಹ್ನ ಅಬುಧಾಬಿ ಏರ್‌ಪೋರ್ಟ್‌ಗೆ ಆಗಮಿಸಿ, ಇಮಿಗ್ರೇಷನ್ ಕೂಡ ಮುಗಿಸಿ ಇನ್ನೇನು ವಿಮಾನದಲ್ಲಿ ವಾಪಸ್ ಭಾರತಕ್ಕೆ ಬರಬೇಕಾಗಿತ್ತು. ಆದರೆ ಅಷ್ಟರಲ್ಲಿ ಮಿಸೈಲ್ ದಾಳಿ ಶುರು ಆಗಿ ವಾಪಸ್ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದಾರೆ.

 ಅದೇ ರೀತಿ ಹಾವೇರಿ ಮೂಲದ ಟೆಕ್ಕಿ  ಕುಟುಂಬವೊಂದು ಅಬುಧಾಬಿಯಲ್ಲಿ ಸಿಲುಕಿಕೊಂಡಿದೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಯುಇಎ ಅಬುಧಾಬಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದು  ಮೊದಲು ನಾನೊಬ್ಬನೇ ಅಬುಧಾಬಿಯಲ್ಲಿ ನೆಲೆಸಿದ್ದೆ. ಒಂದು ತಿಂಗಳ ಹಿಂದಷ್ಟೇ ಪತ್ನಿ, ಇಬ್ಬರು ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಇಲ್ಲಿನ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ. ನಾವಿರುವ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆದ ದೃಶ್ಯ ನೋಡಿ ಕೆಲ ಹೊತ್ತು ಭಯಗೊಂಡಿದ್ದೆವು ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ  ಹೋಗಿರುವ ಅದೆಷ್ಟೋ ಭಾರತೀಯರು ಪರದಾಡುವ ಪರಿಸ್ಥಿತಿ ಎದುರಾಗಿದೆ.  ಅವರ ಕುಟುಂಬಸ್ಥರು ಮುಂದೇನಾಗುವುದೋ ಎಂಬ ಭೀತಿಯಲ್ಲಿಯೇ ದಿನಗಳೆಯುವಂತಾಗಿದೆ.

Post a Comment

0 Comments