Ticker

6/recent/ticker-posts

Ad Code

ಮಲಯಾಳ ಭಾಷಾ ಮಸೂದೆಯನ್ನು ವಿರೋಧಿಸಿ ಕಾಸರಗೋಡು ಕನ್ನಡಿಗರಿಂದ ಧರಣಿ ಸತ್ಯಾಗ್ರಹ

 

ಕುಂಬಳೆ : ಕನ್ನಡ ಭಾಷೆ ಸಂಸ್ಕೃತಿಯನ್ನು ಹತ್ತಿಕ್ಕುವ ಮಲಯಾಳ ಭಾಷಾ ಮಸೂದೆ - 2025ರ ವಿರುದ್ಧ ತೀವ್ರ ಹೋರಾಟ ನಡೆಸಲು ಕನ್ನಡಿಗರು ಒಗ್ಗೂಡ ಬೇಕೆಂದು ಕಾಸರಗೋಡು ಜಿ. ಪಂ. ಸದಸ್ಯ ಸೋಮಶೇಖರ್ ಜೆ. ಎಸ್. ಹೇಳಿದರು. ಕುಂಬಳೆ  ಬಸ್ ನಿಲ್ದಾಣ ಸಮೀಪ ಮಲಯಾಳ  ಭಾಷಾ ಮಸೂದೆ 2025 ಅನ್ನು ವಿರೋಧಿಸಿ ಕಾಸರಗೋಡು ಕನ್ನಡಿಗರು ನಡೆಸಿದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಲಯಾಳ ಭಾಷಾ ಮಸೂದೆ ವಿರುದ್ಧ ಕೇರಳದ  ರಾಜಧಾನಿಯಲ್ಲಿಯೂ ಹೋರಾಟ ನಡೆಸಬೇಕಾಗಿದೆ. ಕನ್ನಡಿಗರಿಗಾಗುತ್ತಿರುವ ಎಲ್ಲ ಅನ್ಯಾಯಗಳ ವಿರುದ್ಧ ಹೋರಾಡಲು ಪೂರ್ಣ ಬೆಂಬಲ ನೀಡುವುದಾಗಿ ಅವರು ಹೇಳಿದರು.

ಬಿಜೆಪಿ ಕಾಸರಗೋಡು ಜಿಲ್ಲಾ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಮಾತನಾಡಿ, ಕಾಸರಗೋಡಿನ ಕನ್ನಡಿಗರು ಕರ್ನಾಟಕದಿಂದ ವಲಸೆ ಬಂದವರಲ್ಲ, ಇಲ್ಲೆ ಹುಟ್ಟಿ ಬೆಳೆದವರು. ಸಂವಿಧಾನಬದ್ಧವಾಗಿ ಲಭ್ಯವಿರುವ ಎಲ್ಲ ಹಕ್ಕುಗಳು ಕನ್ನಡಿಗರಿಗೂ ಲಭಿಸಬೇಕು, ಹಕ್ಕುಗಳನ್ನು ಕಸಿದುಕೊಳ್ಳುವ ಕುತಂತ್ರದ ವಿರುದ್ಧ ಹೋರಾಟ ನಡೆಸಲು ಕನ್ನಡಿಗರೆಲ್ಲರೂ ಒಗ್ಗೂಡಬೇಕು. ಕೆಲವು ವರ್ಷಗಳ ಹಿಂದೆ ಪಿಎಸ್‌ಸಿ ಪರೀಕ್ಷೆಯಲ್ಲಿ ಅನ್ಯಾಯವಾದಾಗ ನಡೆಸಿದ ಹೋರಾಟದ ಪರಿಣಾಮವಾಗಿ ಪಿಎಸ್‌ಸಿ ಮರು ಪರೀಕ್ಷೆ ನಡೆಸಬೇಕಾಗಿ ಬಂದಿತ್ತು. ಅದೇ ರೀತಿಯ ಹೋರಾಟ ಇಂದೂ ನಡೆಸಬೇಕಾಗಿದೆ ಎಂದು ಹೇಳಿದರು.

ಕುಂಬಳೆ ಪಂ. ಸದಸ್ಯ ಮಂಜುನಾಥ ಆಳ್ವ, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕಾರ್ಯದರ್ಶಿ ಪ್ರದೀಪ್ ಬೇಳ, ಕಾರಡ್ಕ ಬ್ಲಾಕ್ ಪಂ. ಸದಸ್ಯ ಸುಧಾಮ ಗೋಸಾಡ, ಕವಿ, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಜಿ. ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಶಶಿಕಲಾ ಟೀಚರ್, ನ್ಯಾಯವಾದಿ ಥೋಮಸ್ ಡಿ'ಸೋಜಾ, ಗಮಕ ಪರಿಷತ್ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ| ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ, ರವಿ ನಾಯ್ಕಾಪು, ಗುರುಪ್ರಸಾದ್ ಕೋಟೆಕಣಿ ಮೊದಲಾದವರು ಮಾತನಾಡಿದರು.

ಡಾ। ಬೇ. ಸಿ. ಗೋಪಾಲಕೃಷ್ಣ ಭಟ್, ಶಿವರಾಮ, ಸತೀಶ್ ಮಾಸ್ತರ್ ಕೂಡ್ಲು ವಿಶಾಲಾಕ್ಷ ಪುತ್ರಕಳ, ಗಣೇಶ್ ಪ್ರಸಾದ್ ಪಾಣೂರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಧಾನ ಸಂಚಾಲಕ ಭಾಸ್ಕರ ಕಾಸರಗೋಡು ಪ್ರಸ್ತಾವನೆಗೈದು ನಿರೂಪಿಸಿದರು. ಲಕ್ಷ್ಮಣ ಪ್ರಭು ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.

Post a Comment

0 Comments