ಕಾಸರಗೋಡು : ಯಕ್ಷಗಾನ ಪಿತಾಮಹ ಕುಂಬಳೆ ಪಾರ್ತಿಸುಬ್ಬರಿಂದ ಸ್ಥಾಪಿಸಲ್ಪಟ್ಟ ಯಕ್ಷಗಾನವನ್ನು ಶಾಸ್ತ್ರೀಯವಾಗಿ ರೂಪ ಕಲ್ಪನೆ ನೀಡಿದ ಕೂಡ್ಲು ಸುಬ್ರಾಯ ಶಾನುಭೋಗರು ಹೊಸ ತಲೆಮಾರಿನ ಯಕ್ಷಗಾನದ ಆದ್ಯ ಪುರುಷರು. ಇವರಿಂದ ರೂಪಿತವಾದ ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಿದವರಲ್ಲಿ ಕಾವು ಕಣ್ಣ, ಬಲಿಪ ನಾರಾಯಣ ಭಾಗವತ, ಕುರಿಯ ವಿಠಲ ಶಾಸ್ತ್ರಿ, ಬಣ್ಣದ ಕುಟ್ಟಿಯಪ್ಪು,ಕೂಡ್ಲು ನಾರಾಯಣ ಬಲ್ಯಾಯ ಮೊದಲಾದವರು ತಮ್ಮ ಶಿಷ್ಯರಿಗೆ ಯಕ್ಷಗಾನದ ನಾಟ್ಯ, ಬಣ್ಣಗಾರಿಕೆ, ವೇಷಗಾರಿಕೆ, ಭಾಗವತಿಕೆ ಮೊದಲಾದ ಪ್ರಕಾರಗಳಲ್ಲಿ ಕಾಲಕಾಲಕ್ಕೆ ಬೇಕಾದ ಬದಲಾವಣೆಯನ್ನು ತಂದು ಯಕ್ಷಗಾನವನ್ನು ಶ್ರೀಮಂತಗೊಳಿಸಿದರು. ಈ ನಿಟ್ಟಿನಲ್ಲಿ ಕೂಡ್ಲು ನಾರಾಯಣ ಬಲ್ಯಾಯರ ಕೊಡುಗೆ ಅಪಾರ ಎಂದು ಜಗದೀಶ್ ಕೂಡ್ಲು ಹೇಳಿದರು. ಅವರು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ರಜತ ರಂಗ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೂಡ್ಲು ನಾರಾಯಣ ಬಲ್ಯಾಯ ಅವರ ಸಂಸ್ಕರಣ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದರು
ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ. ಶಾನ್ ಭೋಗ್ ಅಧ್ಯಕ್ಷತೆ ವಹಿಸಿದ್ದರು, ರಜತರಂಗದ ಅಧ್ಯಕ್ಷ ಡಾ. ಹರಿಕೃಷ್ಣ ಬಂಗೇರ, ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾನು ಪ್ರಕಾಶ್ ಕೂಡ್ಲು, ಯಕ್ಷಾಭಿಮಾನಿ ಕೂಡ್ಲು ಇದರ ಅಧ್ಯಕ್ಷ ಸುನಿಲ್ ಗಟ್ಟಿ, ನಾರಾಯಣ ಬಲ್ಯಾಯಯರ ಪುತ್ರ ಯಾದವ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿಶೋರ್ ಕುಮಾರ್ ಸ್ವಾಗತಿಸಿ, ಕೃಷ್ಣಮೂರ್ತಿ ಅಡಿಗ ವಂದಿಸಿದರು. ಸುರೇಶ್ ಮಣಿಯಾಣಿ ನಿರೂಪಿಸಿದರು.

0 Comments