Ticker

6/recent/ticker-posts

Ad Code

ಮಲಯಾಳ ಭಾಷಾ ಮಸೂದೆ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲು ನಿರ್ಧಾರ

 

ಕಾಸರಗೋಡು : ಕೇರಳ ಸರಕಾರದ  ಮಲಯಾಳ ಭಾಷಾ  ಮಸೂದೆಯ ವಿರುದ್ಧ ಕಾಸರಗೋಡಿನ ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲು  ತೀರ್ಮಾನಿಸಿದಂತೆ ಸಿದ್ಧತೆ ಅಂತಿಮ ಘಟ್ಟದಲ್ಲಿದೆ. ಈ ಮಸೂದೆಯು ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಸೂದೆಯಲ್ಲಿರುವ ವಿಧಿಗಳು ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವಾಗಿದ್ದು, ಕನ್ನಡ ಭಾಷೆಯ ಬಳಕೆ ಮತ್ತು ಅಭಿವೃದ್ದಿಗೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ಕುರಿತು ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಈಗಾಗಲೇ ಎರಡು ಸಭೆಗಳನ್ನು ನಡೆಸಿ, ಮಸೂದೆಯ ಲೋಪದೋಷಗಳ ಬಗ್ಗೆ ಚರ್ಚಿಸಿದ್ದಾರೆ. ಎರಡನೇ ಸಭೆಯಲ್ಲಿ ಕಾನೂನು ಹೋರಾಟ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ತಜ್ಞರ ಸಮಿತಿಯು ಮಸೂದೆಯನ್ನು ಪರಿಶೀಲಿಸಿ, ಇದು ಸಂವಿಧಾನ ವಿರೋಧಿ ಹಾಗೂ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಚ್ಯುತಿ ತರುವಂತದ್ದು ಎಂದು ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲು ಎಲ್ಲಾ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ದಾವೆ ಹೂಡಲು ಕ್ರಮ ಕೈಗೊಳ್ಳಲಾಗಿದೆ.

ಮಾರ್ಚ್ 23, ಸೋಮವಾರ  ಕರ್ನಾಟಕ ಸಮಿತಿಯ ಅಧ್ಯಕ್ಷರಾದ  ಕೆ. ಮುರಳೀಧರ ಬಳ್ಳುಕ್ಕರಾಯ ಅವರ ಅಧ್ಯಕ್ಷತೆಯಲ್ಲಿ  ಕಾಸರಗೋಡಿನಲ್ಲಿನಡೆದ ತಜ್ಞ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಹೆಜ್ಜೆಯಾಗಿ ದಾವೆ ಹೂಡುವ ಪ್ರಕ್ರಿಯೆಗೆ ಚಾಲನೆ ಕೊಡಲಾಗಿದೆ. ಸಭೆಯಲ್ಲಿ ನಿವೃತ್ತ ನ್ಯಾಯಾಧೀಶ ರಾಜಕುಮಾರ ಎಂ.ವಿ, ನಿವೃತ್ತ  ಡಿ.ಇ.ಒ,ನ್ಯಾಯವಾದಿ ಎನ್.ಕೆ ಮೋಹನ್ ದಾಸ್, ನ್ಯಾಯವಾದಿ ಸತ್ಯನಾರಾಯಣ ತಂತ್ರಿ, ನಿವೃತ್ತ ಡಿ.ಡಿ.ಇ  ಮಹಾಲಿಂಗೇಶ್ವರ ರಾಜ್ .ಡಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್.ಎ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ,ಗಮಕ ಪರಿಷತ್ ಕೇರಳ ಗಡಿನಾಡ  ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್, ಲೋಕ ಸೇವಾ ಆಯೋಗದ ನಿವೃತ್ತ ಅಧೀನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಣೂರು ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಕನ್ನಡ ಪರ ಸಂಘಟನೆಗಳು ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.

Post a Comment

0 Comments