ಕಾಸರಗೋಡು : ಉಪ್ಪಳ ಪೇಟೆಯಲ್ಲಿ ಮಾರಕ ಮಾದಕ ವಸ್ತು ಎಂಡಿಎಂಎ ಜೊತೆ ಸೆರೆಯಾಗಿದ್ದ ಆರೋಪಿಗೆ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಮಣಿಮುಂಡದ ಬದರು ಮಂಜಿಲ್‌ನ ಮೊಹಮ್ಮದ್ ಶಮೀರ್ (41) ಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಮು ರಮೇಶ್ ಚಂದ್ರಭಾನು ಶಿಕ್ಷೆ ಪ್ರಕಟಿಸಿದ್ದಾರೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಆಗಸ್ಟ್ 26, 2021 ರಂದು ರಾತ್ರಿ 11:30 ರ ಸುಮಾರಿಗೆ ನಡೆದಿತ್ತು. ಉಪ್ಪಳ ಪೇಟೆಯಲ್ಲಿ ಅಂದಿನ ಮಂಜೇಶ್ವರ ಸಬ್ ಇನ್ಸ್‌ಪೆಕ್ಟರ್ ಎ. ಬಾಲಚಂದ್ರನ್ ಅವರು 11 ಗ್ರಾಂ ಎಂಡಿಎಂಎ ಜೊತೆ ಶಮೀರ್ ಅವರನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿದ ನಂತರ, ಅಂದಿನ ಮಂಜೇಶ್ವರ ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೆಚ್ಚುವರಿ ಸರ್ಕಾರಿ ವಕೀಲ ಜಿ. ಚಂದ್ರಮೋಹನ್, ಅಡ್ವ. ಚಿತ್ರಕಲಾ ಪ್ರಾಸಿಕ್ಯೂಟರ್ ಪರ ವಾದಿಸಿದ್ದರು.

0 Comments