ಪೆರ್ಲ: ನೂತನವಾಗಿ ಜೀರ್ಣೋದ್ಧಾರಗೊಂಡ ಬಜಕೂಡ್ಲುಮುಗೇರುಹಿತ್ಲು ಸುವರ್ಣ ತರವಾಡು ಮನೆ ಹಾಗೂ ಶ್ರೀ ಧೂಮಾವತೀ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ಧರ್ಮ ದೈವಗಳ ನೇಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಬಜಕೂಡ್ಲುವಿನಲ್ಲಿ ನಡೆಯಿತು. ತರವಾಡಿನ ಪೂಜಾರಿವರ್ಯರಾದ ಸೋಂಪ ಪೂಜಾರಿ ಬೇರ್ಯ ಅವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂಕಪ್ಪ ಸುವರ್ಣ ಅವರಿಗೆ ನೀಡುವ ಮೂಲಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ತರವಾಡಿನ ಹಿರಿಯರಾದ ಕರಿಯಪ್ಪ ಪೂಜಾರಿ ಬಜಕೂಡ್ಲು, ಆಡಳಿತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ ಸುವರ್ಣ ಮಾಣಿಗೆಹಿತ್ತಿಲು, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಜಗದೀಶ ಜೋಡುಕಲ್ಲು, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಮಾಸ್ತರ್ ಮುಂಡಿತ್ತಡ್ಕ ಇವರು ಉಪಸ್ಥಿತರಿದ್ದರು. ತರವಾಡಿನ ಹಿರಿಯ ಹಾಗೂ ಕಿರಿಯ ಸದಸ್ಯರು ಮತ್ತು ಊರಿನ ಭಗವದ್ಭಕ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಳಿಕ ಆಡಳಿತ ಸಮಿತಿಯ ವಿಶೇಷ ಸಭೆ ಮತ್ತು ಜೀರ್ಣೋದ್ಧಾರ ಸಮಿತಿಯ ತಿಂಗಳ ಅವಲೋಕನ ಸಭೆ ನಡೆಯಿತು. 2026 ನೇ ಎಪ್ರಿಲ್ ತಿಂಗಳ 11 ರಿಂದ 13 ರವರೆಗೆ ಆಚಾರ್ಯವರ್ಯರಾದ ಶ್ರೀ ಚಂದ್ರಶೇಖರ ನಾವಡ ಬಜಕೂಡ್ಲು ಇವರ ಕಾರ್ಮಿಕತ್ವದಲ್ಲಿ ನೂತನ ತರವಾಡು ಮನೆ, ನಾಗ ದೇವರು, ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಲಿದೆ.

0 Comments