ಕುಂಬ್ಡಾಜೆ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಸ್ಥಾಪಕರ ದಿನಾಚರಣೆಯು ನಡೆಯಿತು. ಪ್ರಪ್ರಥಮವಾಗಿ ಶ್ರೀ ಅನ್ನಪೂರ್ಣೇಶ್ವರೀ ಸಂಸ್ಕೃತ ಶಾಲೆಯು ಆರಂಭಗೊಂಡಿದ್ದ ಸಂದರ್ಭದಲ್ಲಿ ಶಾಲೆಯ ಸ್ಥಾಪಕರಾಗಿದ್ದ ದಿವಂಗತ ಶ್ರೀ ಬಳ್ಳಪದವು ವಾಸುದೇವ ಉಪಾಧ್ಯಾಯರ ಸಂಸ್ಮರಣೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷರಾಗಿರುವ ಡಾಕ್ಟರ್ ಎ.ಪಿ. ಭಟ್ ವಹಿಸಿದ್ದರು. ಶಾಲೆಯ ನಿವೃತ್ತ ಅಧ್ಯಾಪಕರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಾಲೆಯ 102 ವರುಷಗಳ ಇತಿಹಾಸ ಹಾಗೂ ಹಂತ ಹಂತವಾಗಿ ಅಭಿವೃದ್ಧಿ ಹೊಂದಿ ಉನ್ನತ ಹಾಗೂ ಮೌಲ್ಯಯುತ ಶಿಕ್ಷಣ ಸಂಸ್ಥೆಯಾಗಿ ಬೆಳೆದ ವಿಚಾರಗಳು ಎಲ್ಲರನ್ನೂ ಪುಳಕಿತಗೊಳಿಸಿತು. ಶಾಲಾ
ವ್ಯವಸ್ಥಾಪಕರಾದ ಶ್ರೀ ನಾರಾಯಣ ಶರ್ಮ ಬಳ್ಳಪದವು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದರು ಹಾಗೂ ವ್ಯವಸ್ಥಾಪಕ ಮಂಡಳಿಯ ಉಪ ಕಾರ್ಯದರ್ಶಿ ಶ್ರೀ ಮಧುಸೂದನ್ ತೈರೆ ವಂದನಾರ್ಪಣೆಗೈದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು, ಮಾತೃ ಸಮಿತಿ ಅಧ್ಯಕ್ಷೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಕಾರ್ಯಕಾರೀ ಸಮಿತಿಗಳ ಸದಸ್ಯರು, ಶಾಲಾ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಅಧ್ಯಾಪಕ-ಅಧ್ಯಾಪಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

0 Comments