Ticker

6/recent/ticker-posts

Ad Code

ಉದ್ಯಮಿ,ಸಮಾಜ ಸೇವಕ ರೊನಾಲ್ಡ್ ಮಾರ್ಟಿಸ್ ಶಾರ್ಜಾ ಕರ್ನಾಟಕ ಸಂಘದ ಮಯೂರ- ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

 


ದುಬೈ : ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ 2025 ನೇ ಸಾಲಿನ 'ಮಯೂರ- ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ' ಯುಎಇಯ ಉದ್ಯಮಿ ಸಮಾಜ ಸೇವಕರಾದ ದ.ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರೊನಾಲ್ಡ್ ಮಾರ್ಟಿಸ್ ರವರ ಮಡಿಲಿಗೆ.

     ನವೆಂಬರ್ 16 ರಂದು ಸಂಜೆ 3.30 ರಿಂದ ಶಾರ್ಜಾದ ವುಮೇನ್ಸ್ ಯುನಿಯನ್ ಅಸೋಸಿಯೇಶನ್ ನ ಸಭಾಂಗಣದಲ್ಲಿ (Womens Union Association Hall)ನಡೆಯಲಿರುವ ಶಾರ್ಜಾ ಕರ್ನಾಟಕ ಸಂಘದ 23 ನೇ  ವರ್ಷದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ನಡೆಯಲಿದೆ.ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಸಮಾಜ ಸೇವಕರಾದ ರೊನಾಲ್ಡ್ ಮಾರ್ಟಿಸ್ ರವರಿಗೆ ಮಯೂರ ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ,ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ವಾಸು ಶೆಟ್ಟಿ ಮತ್ತು ಸಮಾಜಸೇವೆಯನ್ನು ಗುರುತಿಸಿ ಅಬ್ದುಲ್ ಲತೀಫ್ ಮೂಲ್ಕಿಯವರಿಗೆ ಸಾಧಕ ಪ್ರಶಸ್ತಿ ಹಾಗೂ ಸಂಸ್ಥೆಗೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸಂಸ್ಥೆಯ ಪದಾಧಿಕಾರಿಯಾದ ಸಯ್ಯದ್ ಅಜ್ಮಲ್ ರವರನ್ನು ಸನ್ಮಾನಿಸಲಾಗುವುದು.

   


   ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಅನಿವಾಸಿ ಕನ್ನಡಿಗರ ಮಕ್ಕಳಿಂದ "ಚಿಣ್ಣರ ಚಿಲಿಪಿಲಿ" ಛದ್ಮವೇಷ ಸ್ಪರ್ಧೆ ಮತ್ತು "ಬಾನ ದಾರಿಯಲ್ಲಿ" ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಶ್ರೀಮತಿ ವಂದನಾ ರೈ ಕಾರ್ಕಳರವರು ಆಗಮಿಸಲಿದ್ದಾರೆ.

ರೊನಾಲ್ಡ್ ಮಾರ್ಟಿಸ್ ರವರ ಕಿರು ಪರಿಚಯ :

 


ದ.ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಎಂಬ ಚಿಕ್ಕ ಹಳ್ಳಿಯಿಂದ ಪ್ರಾರಂಭವಾಗಿ ಇಂದು ಸಾಗರದಾಚೆಗೆ ಸಾಗಿ ಬಂದಿರುವುದು ಇವರ ನಿರ್ದಿಷ್ಟ ಗುರಿ ಮತ್ತು ಕಠಿಣ ಪರಿಶ್ರಮದ ಫಲ ಎಂದರೆ ತಪ್ಪಾಗಲಾರದು.ಸಜೀಪ ನಡುವಿನಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಜೀಪ ಮೂಡದಲ್ಲಿ ಕಾಲೇಜು ಶಿಕ್ಷಣ ಮುಗಿಸಿ 1994 ರಲ್ಲಿ ತನ್ನ ಸಹೋದರನ ಪೂನದ ಉದ್ಯಮದಲ್ಲಿ ಸಹಾಯಕನಾಗಿ ದುಡಿದು 1998 ರಲ್ಲಿ ಪುನಃ ಮಂಗಳೂರಿಗೆ ಬಂದು ಸೈಂಟ್ ಅಂತೋನಿ ಟ್ರಾನ್ಸ್ ಪೋರ್ಟ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಉದ್ಯಮರಂಗಕ್ಕೆ ಕಾಲಿಟ್ಟರು.ಆ ಉದ್ಯಮ‌ ಹಸಿರಾಗದ ಕಾರಣ 2004 ರಲ್ಲಿ ಮರುಭೂಮಿ ದುಬೈಗೆ ತೆರಳಿ RAK CERAMIC ಕಂಪೆನಿಯಲ್ಲಿ ಸಾಮಾನ್ಯ ಮಟ್ಟದ ಒಂದು ಉದ್ಯೋಗದಲ್ಲಿ ತೊಡಗಿಸಿಕೊಂಡರು ನಂತರ ಅಮೆರಿಕನ್ ಕಂಪನಿ RAK LATICRATEಗೆ  ಸೇರಿದ ಇವರು ಯುಎಇಯ ಬಹುಮಹಡಿ ಕಟ್ಟಡವಾದ ಬುರ್ಜ್ ಅಲ್ ಖಲೀಫಾದ ಕನ್ಸ್ಟ್ರಕ್ಷನ್ ಕೆಲಸದಲ್ಲಿ ಕೂಡ ದುಡಿದಿದ್ದರು.ದಣಿವರಿಯದ ದುಡಿಮೆಗಾರರಾದ ರೊನಾಲ್ಡ್ ಮಾರ್ಟಿಸ್ ರವರಿಗೆ ಜೀವನಲ್ಲಿ ಮುಂದೆ ಬಂದು ಏನಾದರೂ ಸಾಧನೆ ಮಾಡಬೇಕು ಆತ್ಮವಿಶ್ವಾಸ ಇದ್ದ ಇವರು 2009ರ ಇಸವಿಯಲ್ಲಿ ಬರಿ ನಾಲ್ಕು ಮಂದಿ ಕಾರ್ಮಿಕರನ್ನಿಟ್ಟುಕೊಂಡು  ಬ್ಲೂ ರೋಯಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.ಈ ಸಂಸ್ಥೆಯಲ್ಲಿ ಸಾವಿರಾರು ಮಂದಿ ದುಡಿಯುತ್ತಿರುವ ಈ ಕಂಪೆನಿ ಪ್ರಸ್ತುತ ಅನೇಕ ಕಂಪನಿಗಳ ಒಳಗೊಂಡ ಬ್ಲೂ ರೋಯಲ್ ಗ್ರೂಪ್ ಆಫ್ ಕಂಪೆನಿಯಾಗಿ ರೂಪುಗೊಂಡಿದೆ.

      ತಾನು ಬೆಳೆಯುತ್ತಾ ಇತರರನ್ನು ಬೆಳೆಸುತ್ತಾ ಸಮಾಜಮುಖಿಯಾಗಿ ಗುರುತಿಸಲ್ಪಟ್ಟಿರುವ ಮಾರ್ಟಿಸ್ ರವರು ತುಳು-ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಸೈ ಎನಿಸಿದವರು.ಪರೋಪಕಾರಿಯು,ಮಾನವ ಪ್ರೇಮಿಯು ಆಗಿರುವ ಮಾರ್ಟಿಸ್ ರವರು ಸಹಾಯ ಕೋರಿ ಬಂದವರನ್ನು ಆಲಿಸಿ ಸ್ಪಂದಿಸುವ ಜಾಯಮಾನವುಳ್ಳವರು.ತಾನು ನಡೆದು ಬಂದ ದಾರಿಯನ್ನು ಮರೆಯದೆ ಸಾಮಾಜಿಕ, ಶೈಕ್ಷಣಿಕ,ಸಾಂಸ್ಕೃತಿಕ ರಂಗಕ್ಕೆ ಕೊಡುಗೆ ನೀಡಿದ್ದಾರೆ.ಊರಿನ ಮೊಗರ್ನಾಡು ಚರ್ಚಿನ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಮೊಗರ್ನಾಡು ದೇವಮಾತ ಇಂಗ್ಲಿಷ್ ಮೀಡಿಯಂ ಶಾಲಾ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ.ಅಲ್ಲದೆ ಹಲವಾರು ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಸಹಾಯ ಸಹಕಾರ ನೀಡುತ್ತಾ ಬಂದಿರುವ ಮಾರ್ಟಿಸ್ ರವರು ತನ್ನ ಐವತ್ತರ ಹುಟ್ಟು ಹಬ್ಬದ ಸಂಭ್ರಮದ ದಿನದಂದು ವೈ.ಎಂ.ಫ್ರೆಂಡ್ಸ್ ನ ಸಹಯೋಗದೊಂದಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಊಟೋಪಚಾರದ ನೀಡಿ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

       ಇವರ ಉದ್ಯಮ ರಂಗದ ಯಶಸ್ವನ್ನು ಸೇವಾ ರಂಗದ ಒಳಿತನ್ನು ಮನ್ನಿಸಿ ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಗಳು ಪ್ರಶಸ್ತಿಗಳು ಹರಿಸಿ ಬಂದಿದೆ.ಅದರಲ್ಲಿ ಮುಖ್ಯವಾಗಿ 2024 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ವತಿಯಿಂದ ಸಾಧಕ ಸನ್ಮಾನ, ಕರ್ನಾಟಕ ಸಂಘ ದುಬಾಯಿ ವತಿಯಿಂದ ಸನ್ಮಾನ,ಯುವಕ ಮಂಡಲ (ರಿ) ಶ್ರೀ ಶಾರದಾ ಪೂಜಾ ಸಮಿತಿ ಸುಭಾಷ್ ನಗರ ಸಜೀಪಮೂಡದ ವತಿಯಿಂದ ಹುಟ್ಟೂರ ಸನ್ಮಾನಗಳು ನಡೆದಿದೆ.

    ಪತ್ನಿ ಶ್ರೀಮತಿ ಕೋನ್ಲಿ ಮಾರ್ಟಿಸ್ ಮಕ್ಕಳಾದ ರಚೇಲ್,ರಸ್ಸೆಲ್ ರವರೊಂದಿಗೆ ಸುಖಜೀವನ ನಡೆಸುತ್ತಿರುವ ನಮ್ಮ ಮಾಧ್ಯಮದ ವತಿಯಿಂದ ಅಭಿನಂದನೆಗಳು.

ಪ್ರತಿನಿಧಿ ವರದಿ :  ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

Post a Comment

0 Comments