ಉಪ್ಪಳ : ಯಾವುದೇ ಸೌಕರ್ಯವಿಲ್ಲದೆ 12 ವರ್ಷಗಳಿಂದೀಚೆಗೆ ಉಪ್ಪಳದ 3 ಮಹಡಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಮಂಜೇಶ್ವರ ತಾಲೂಕು ಕಚೇರಿಯನ್ನು ಆದಷ್ಟು ಬೇಗ ಸುಸಜ್ಜಿತ ಸರಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ ಹಾಗೂ ವೆಳ್ಳರಿಕುಂಡು ಎರಡು ತಾಲೂಕುಗಳು ಒಂದೇ ಸಮಯದಲ್ಲಿ ಅನುಷ್ಠಾನಕ್ಕೆ ಬಂದು ವೆಳ್ಳರಿಕುಂಡು ತಾಲೂಕಿಗೆ ಸೂಕ್ತ ಸರಕಾರಿ ಕಟ್ಟಡವಾಗಿ 7 ವರ್ಷಗಳೂ ಕಳೆದರೂ ಮಂಜೇಶ್ವರ ತಾಲೂಕಿಗೆ ಮುಕ್ತಿಯಾಗದ್ದು ನಾಚಿಕೆಗೇಡಿನ ಸಂಗತಿ ಎಂದು ಸಿಪಿಐ ಕುಂಬ್ಳೆ ಬ್ರಾಂಚ್ ಸೆಕ್ರೆಟರಿ ನಾರಾಯಣ್ ಕುಂಬ್ಳೆ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ತಾಲೂಕು ಕಾರ್ಯಾಚರಿಸುವ ಕಟ್ಟಡಕ್ಕೆ 3 ತಿಂಗಳಿನಿಂದ ವಿದ್ಯುತ್ ಸಂಬಂಧಿತ ಸಮಸ್ಯೆಗಳೂ ಇದ್ದು ಉಳಿದ ಅಂಗಡಿ ವ್ಯಾಪಾರಿಗಳು ಜನರೇಟರ್ ಬಳಸಿ ವ್ಯಾಪಾರ ನಡೆಸಿರುವುದರಿಂದ ಇದರ ಹೊಗೆ, ಕರ್ಕಶ ಧ್ವನಿಯಿಂದ ಕಚೇರಿಗೆ ಬರುವ ಜನಸಾಮಾನ್ಯರಿಗೂ, ಉದ್ಯೋಗಿಗಳಿಗೂ ಉಸಿರುಗಟ್ಟಿ ನಿಲ್ಲುವ ಪರಿಸ್ಥಿತಿಯಾಗಿದೆ. ಅವೆಷ್ಟೋ ವೃದ್ಧರು, ಮಹಿಳೆಯರು, ಗರ್ಭಿಣಿಯರು, ಮಕ್ಕಳೆನ್ನದೆ ಈ ಮೂರು ಮಹಡಿಯ 40-50 ಮೆಟ್ಟಿಲುಗಳನ್ನು ಏರಿ ತಾಲೂಕಿಗೆ ಬರುವಾಗ ಅವೆಷ್ಟೋ ಭಾರಿ ತಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಿದ್ದಾರೆ. ಮಾತ್ರವಲ್ಲದೆ ಇಕ್ಕಟ್ಟಿನ ಈ ಕಟ್ಟಡದಲ್ಲಿ ಈಗ ವಿದ್ಯುತ್ ವ್ಯವಸ್ಥೆಯಿಲ್ಲದೆ ಕತ್ತಲು ಆವರಿಸಿದೆ. ಈ ಕಟ್ಟಡದ ಅವ್ಯವಸ್ಥೆಯ ಕಾರಣ ನೀರೆಲ್ಲಾ ಆವೃತವಾಗಿ ಕತ್ತಲೆಯಲ್ಲಿ ಮೆಟ್ಟಿಲು ಏರುವುದರೊಂದಿಗೆ ನೀರೆಲ್ಲಾ ಕಟ್ಟಿ ನಿಂತು ಅಲ್ಲಲ್ಲಿ ವೇಸ್ಟ್ ಬಿಸಾಡಿ ಸೊಳ್ಳೆಗಳ ಕಾಟವೂ ಇದ್ದು ತಾಲೂಕು ಕಚೇರಿ ರೋಗಗಳನ್ನು ಬರಮಾಡುವ ತಾಣವಾಗಿ ಮಾರ್ಪಟ್ಟಿದೆ. ಇಷ್ಟೊಂದು ದೀರ್ಘ ಸಮಯ ದೊಡ್ಡ ಪ್ರಶ್ನೆಯಾಗಿ ಉಳಿದ ಈ ಕಟ್ಟಡದ ಅವ್ಯವಸ್ಥೆಯ ಕುರಿತಾಗಲಿಯೂ, ತಾಲೂಕು ಕಟ್ಟಡದ ಕುರಿತಾಗಲಿಯೂ, ಇಲ್ಲಿಯ ಶುಚಿತ್ವದ ಕುರಿತಾಗಲಿಯೂ, ಅಸೌಕರ್ಯ ಸಮಸ್ಯೆಯ ಕುರಿತಾಗಲಿಯೂ ಯಾವುದೇ ಪಕ್ಷಗಳ ಸ್ಥಳೀಯ ಮುಖಂಡರೂ ಮಾತೆತ್ತದಿರುವುದು ಹಾಸ್ಯಾಸ್ಪದ. ಆದಷ್ಟು ಬೇಗ ಈ ಕಚೇರಿಯನ್ನು ಸೂಕ್ತ ಸರಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಅವರು ಮಾನ್ಯ ಕಂದಾಯ ಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿಯ ಜನಸಾಮಾನ್ಯರ ಜೀವಕ್ಕೆ ಬರುವ ಅಪಾಯಕ್ಕೆ ನೇರವಾಗಿ ಸರಕಾರವೇ ಹೊಣೆಯಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
0 Comments