ಮಂಗಳೂರು: ದೈವಾರಾಧನೆ ಬಗ್ಗೆ ತುಳುನಾಡಿನಲ್ಲಿ ಗಾಢವಾದ ನಂಬಿಕೆಯಿದೆ.ಇದಕ್ಕೆ ಯಾವತ್ತೂ ಅಪಚಾರವಾಗಬಾರದು. ದೈವ ದೇವರ ಬಗ್ಗೆ ಅಪಹಾಸ್ಯ ಯಾರೂ ಮಾಡಬಾರದು. ಹಾಗೂ ಜನರ ನಂಬಿಕೆಗೆ ಧಕ್ಕೆ ಆಗದಂತೆ ಹಾಗೂ ಅಪನಂಬಿಕೆ ಮೂಡಿಸುವ ಕಾರ್ಯವನ್ನೂ ಯಾರೂ ಮಾಡಬಾರದು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.
ಉರ್ವಸ್ಟೋರ್ ನ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿರವಿವಾರ ನಡೆದ ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಮಂಗಳೂರು ಇದರ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂತಾರ ಸಿನೆಮಾದಿಂದ ದೈವಕ್ಕೆ ನಿಂದನೆ ಆದ ಹಾಗಿಲ್ಲ. ತಿಳುವಳಿಕೆ ಇಲ್ಲದವರ ವರ್ತನೆಯಿಂದ ಆ ಬಳಿಕ ಭಕ್ತರ ಮನಸಿಗೆ ನೋವಾಗಿದೆ. ನಾವು ನಂಬಿದ ದೈವಕ್ಕೆ ಏನೂ ಆಗುವುದಿಲ್ಲ. ಆದರೆ ದೈವವನ್ನು ನಂಬಿದ ಭಕ್ತರಿಗೆ ನೋವಾಗುತ್ತದೆ ಎಂದು ಹೇಳಿದ ಅವರು ಕಾಂತಾರ ಬಂದ ಬಳಿಕ ತುಳುನಾಡಿನ ದೈವ ದೇವರ ಬಗ್ಗೆ ಯುವಜನರಿಗೆ ಆಸಕ್ತಿ, ಕುತೂಹಲ ಅಧಿಕವಾಗಿದೆ. ಉತ್ತೇಜನ ದೊರಕಿದೆ. ದೈವದ ಬಗ್ಗೆ ನಂಬಿಕೆಯೂ ಇಮ್ಮಡಿಯಾಗುತ್ತಿದೆ ಎಂದರು.
ಪ್ರಸಕ್ತ ದಿನದಲ್ಲಿ ಮಕ್ಕಳಿಗೆ ದೈವ ದೇವರ ಬಗ್ಗೆ ವಿವರವೇ ಗೊತ್ತಿಲ್ಲದ ಸ್ಥಿತಿ ಇದೆ. ವಿದ್ಯಾಭ್ಯಾಸ, ಉದ್ಯೋಗದ ಕಾರಣದಿಂದ ದೈವದ ಕಾರ್ಯ ನಡೆಸಲು ಜನ ಇಲ್ಲ ಎಂಬ ಕೊರಗು ಕೆಲವೆಡೆ ಕಾಡುತ್ತಿದೆ. ವಿದ್ಯೆ, ಉದ್ಯೋಗ ಅಗತ್ಯವಾದರೂ ಈ ಮಣ್ಣಿನ ಶಕ್ತಿ ದೈವಾರಾಧನೆ ಬಗ್ಗೆ ಸಮತೋಲನ ನೆಲೆಯಲ್ಲಿತೊಡಗಿಸಿ ಕೊಳ್ಳಬೇಕಾಗಿದೆ ಎಂದರು.
ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಎಂ.(ಅಣ್ಣು ಪೂಜಾರಿ) ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಿ.ವೇದವ್ಯಾಸ ಕಾಮತ್, ಉದ್ಯಮಿ ಲಂಚುಲಾಲ್ ಕೆ.ಎಸ್., ಜ್ಯೋತಿಷ್ಯ ಪ್ರಕಾಶ್ ವಿ. ಹೊಳ್ಳ, ಬ್ರಹ್ಮಶ್ರೀ ನಾರಾಯಣ ಗುರು ವೈದಿಕ ಸಮಿತಿಯ ಹರೀಶ್ ಶಾಂತಿ ಪುತ್ತೂರು, ಕುಳಾಯಿ ಗುತ್ತು ಗಡಿಕಾರ ಪಟೇಲ್ ಶಂಕರ್ರೈ, ಪಂಬದ ಯಾನೆ ದೈವಾಧಿಗಾರ ಸಂಘ ಗಂಧಕಾಡು ಅಧ್ಯಕ್ಷ ಪುರುಷೋತ್ತಮ ಗೋಳಿಪಲ್ಕೆ,ಪ್ರಮುಖರಾದ ಕೃಷ್ಣ ಅಡಿಗ, ಪಮ್ಮಿ ಕೊಡಿಯಾಲ್ ಬೈಲ್, ಬಿ.ಕೆ. ಬೂಬ ಪೂಜಾರಿ ಮಲರಾಯಸ್ಥಾನ ಮುಂತಾದವರು ಉಪಸ್ಥಿತರಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯರಿಗೆ ಆರೋಗ್ಯ ವಿಮೆ ಮಾಡಲಾಯಿತು.
ಟ್ರಸ್ಟ್ ಉಪಾಧ್ಯಕ್ಷ ವಿಜಯ್ ಚೌಟ ಚಾವಡಿದಡಿ ಸ್ವಾಗತಿಸಿ, ಪ್ರಸ್ತಾವಿಸಿದರು.ಶ್ರುತನ್ ವಿ.ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ದೀಪಕ್ ಅಡ್ಯಾರ್ ನಿರೂಪಿಸಿದರು.
0 Comments