ಕಾಸರಗೋಡು: ಜಿಲ್ಲಾ ಪೊಲೀಸ್ ಅಧಿಕಾರಿ ವಿಜಯ ಭಾರತ್ ರೆಡ್ಡಿಯವರ ಆದೇಶದಂತೆ ಕಾಸರಗೋಡು ಜಿಲ್ಲೆಯಲ್ಲಿ ಇಂದು (ಶುಕ್ರವಾರ) ವ್ಯಾಪಕ ದಾಳಿ, ಕಾರ್ಯಾಚರಣೆ ನಡೆಯಿತು. ಈ ವೇಳೆ ಉಪ್ಪಳ, ಚೆರ್ಕಳ ಎಂಬೆಡೆಗಳಿಂದ ಭಾರೀ ಪ್ರಮಾಣದ ನಿಷೇಧಿತ ಪಾನ್ ಮಸಾಲ ವಶಪಡಿಸಲಾಗಿದೆ. 3 ಕಾರುಗಳಲ್ಲಿ ಸಾಗಿಸಿದ 45930 ಪ್ಯಾಕೆಟ್ ಪಾನ್ ಮಸಾಲ ವಶಪಡಿಸಲಾಗಿದೆ.
ಇಂದು ಮುಂಜಾನೆ ತಲಪ್ಪಾಡಿ ಫಾರೆಸ್ಟ್ ಚೆಕ್ ಪೋಸ್ಟಿನ ಬಳಿ ಎಸ್.ಐ. ಕೆ.ಜಿ.ರತೀಷರ ನೇತೃತ್ವದಲ್ಲಿ ನಡೆಸಿದ ತಪಾಸಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ 26112 ಪ್ಯಾಕೆಟ್ ಪಾನ್ ಮಸಾಲ ವಶಪಡಿಸಲಾಗಿದೆ. ಉಪ್ಪಳ ಅಗರ್ತಿಮೂಲೆಯ ಮೊಯ್ದೀನ್ ಕುಞ(47) ಎಂಬಾತನ ವಿರುದ್ದ ಕೇಸು ದಾಖಲಿಸಲಾಗಿದೆ. ಗೋಣಿ ಚೀಲದಲ್ಲಿ ತುಂಬಿಸಿ ಪಾನ್ ಮಸಾಲ ಪ್ಯಾಕೆಟುಗಳನ್ನು ಕಾರಿನಲ್ಲಿ ಸಾಗಿಸಲಾಗುತ್ತಿತ್ತು.
ವಿದ್ಯಾನಗರ ಇನ್ಸ್ಪೆಕ್ಟರ್ ಕೆ.ಪಿ.ಶೈನ್ ಅವರ ನೇತೃತ್ವದಲ್ಲಿ ಚೆರ್ಕಳ ಪರಿಸರದಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಎರಡು ಕಾರುಗಳಿಂದ 19818 ಪ್ಯಾಕೆಟ್ ಪಾನ್ ಮಸಾಲ ವಶಪಡಿಸಲಾಗಿದೆ. ಚೆಟ್ಟುಂಗುಯಿ ನಿವಾಸಿ ರಾಶೀದ್(31) ಎಂಬಾತನನ್ನು ಬಂಧಿಸಲಾಯಿತು. ಇಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 15 ವಾರೆಂಟ್ ಆರೋಪಿಗಳನ್ನು, ತಲೆ ಮರೆಸಿಕೊಂಡ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


0 Comments